ADVERTISEMENT

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಅಧ್ಯಕ್ಷರಾಗಿ ನರಿಂದರ್‌ ಬಾತ್ರಾ ಮುಂದುವರಿಕೆ

ಪಿಟಿಐ
Published 9 ಮೇ 2020, 19:30 IST
Last Updated 9 ಮೇ 2020, 19:30 IST
ನರಿಂದರ್‌ ಬಾತ್ರಾ 
ನರಿಂದರ್‌ ಬಾತ್ರಾ    

ಲೂಸನ್: ಭಾರತದ ನರಿಂದರ್‌ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಅವರು ಮುಂದಿನ ವರ್ಷದ ಮೇ ತಿಂಗಳವರೆಗೂ ಈ ಹುದ್ದೆಯಲ್ಲಿ ಇರಲಿದ್ದಾರೆ.

ಎಫ್‌ಐಎಚ್‌ನ ವಾರ್ಷಿಕ ಕಾಂಗ್ರೆಸ್‌, ಅಕ್ಟೋಬರ್‌ 28ರಂದು ನವದೆಹಲಿಯಲ್ಲಿ ನಿಗದಿಯಾಗಿತ್ತು. ಕೋವಿಡ್‌–19 ಪಿಡುಗಿನ ಕಾರಣ ಇದನ್ನು ಮುಂದೂಡಲಾಗಿದೆ. ಅಲ್ಲಿಯವರೆಗೂ ಈಗ ಅಸ್ತಿತ್ವದಲ್ಲಿರುವ ಮಂಡಳಿಯೇ ಫೆಡರೇಷನ್‌ನ ಕಾರ್ಯ ಕಲಾಪಗಳನ್ನು ನೋಡಿಕೊಳ್ಳಲಿದೆ.

ADVERTISEMENT

‘ಎಫ್‌ಐಎಚ್‌ ಅಧ್ಯಕ್ಷರು ಸೇರಿದಂತೆ ಫೆಡರೇಷನ್‌ನ ಸದಸ್ಯರ ಅಧಿಕಾರಾವಧಿಯು ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಕೋವಿಡ್‌ ಪಿಡುಗಿನಿಂದಾಗಿ ಎಫ್‌ಐಎಚ್‌ ಕಾಂಗ್ರೆಸ್‌ ಅನ್ನು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಅಲ್ಲಿಯವರೆಗೂ ಈಗಿರುವ ಮಂಡಳಿಯೇ ಅಧಿಕಾರದಲ್ಲಿಮುಂದುವರಿ ಯಲಿದೆ’ ಎಂದು ಎಫ್‌ಐಎಚ್‌, ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷರೂ ಆಗಿರುವ ಬಾತ್ರಾ, 2016ರ ನವೆಂಬರ್‌ನಲ್ಲಿ ಎಫ್‌ಐಎಚ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಸದಸ್ಯರೂ ಆಗಿದ್ದಾರೆ.

ವಾರ್ಷಿಕ ಕಾಂಗ್ರೆಸ್ ಅನ್ನು‌ ಮುಂದೂಡುವ ಸಾಧ್ಯತೆಗಳ ಬಗ್ಗೆ ಎಫ್‌ಐಎಚ್‌ ಹೋದ ತಿಂಗಳು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ (137) ಮಾಹಿತಿ ನೀಡಿತ್ತು.

‘ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಿದ್ದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರೀಡೆಯ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ’ ಎಂದು ಬಾತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.