ADVERTISEMENT

ಆರ್ಥಿಕ ಮುಗ್ಗಟ್ಟಿನಲ್ಲಿ ಫುಟ್‌ಬಾಲ್‌ ಫೆಡರೇಷನ್‌

₹ 25 ಕೋಟಿ ಬಾಕಿಯಿ‌ರಿಸಿರುವ ರಿಲಯನ್ಸ್‌

ಪಿಟಿಐ
Published 27 ಜೂನ್ 2019, 19:26 IST
Last Updated 27 ಜೂನ್ 2019, 19:26 IST
   

ನವದೆಹಲಿ (ಪಿಟಿಐ): ವಾಣಿಜ್ಯ ಪಾಲುದಾರ ಐಎಂಜಿ– ರಿಲಯನ್ಸ್‌ ಸಂಸ್ಥೆ ₹ 25 ಕೋಟಿ ಬಾಕಿಯಿ‌ರಿಸಿರುವ ಕಾರಣ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್ಎ‌ಫ್‌) ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಸಂಸ್ಥೆಯು, ಕೊನೆಯ ಎರಡು ತ್ರೈಮಾಸಿಕಗಳಲ್ಲಿ ನೀಡಬೇಕಾದ ಹಣವನ್ನು ಬಾಕಿವುಳಿಸಿದೆ. ಇದರಿಂದಾಗಿ ಐ–ಲೀಗ್‌ ವಿಜೇತ ಚೆನ್ನೈ ಸಿಟಿ ತಂಡಕ್ಕೆ ಒಂದು ಕೋಟಿ ನಗದು ಬಹುಮಾನ ಮೊತ್ತ ಇನ್ನೂ ಕೊಟ್ಟಿಲ್ಲ. ರೆಫ್ರಿಗಳಿಗೆ ಪಂದ್ಯ ಶುಲ್ಕ ಮತ್ತು ಪ್ರಯಾಣd ವೆಚ್ಚ ಕೂಡ ಪಾವತಿಯಾಗಿಲ್ಲ.

ಎಐಎಫ್‌ಎಫ್‌ ಸಮಿತಿ ಸದಸ್ಯರೂ ಆಗಿರುವ ರಿಲಯನ್ಸ್ ಸ್ಪೋರ್ಟ್ಸ್‌ ಸಿಇಒ ಸುಂದರ್ ರಾಮನ್‌, ಅವರಿಂದಈ ವಿಷಯದ ಬಗ್ಗೆ ಪ್ರತಿಕ್ರಿಯೆ ಪಡೆ ಯಲು ಯತ್ನಿಸಿದರೂ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ADVERTISEMENT

2010ರಲ್ಲಿ ಎಐಎಫ್ಎಫ್‌ ಮತ್ತು ಐಎಂಜಿ ರಿಲಯನ್ಸ್‌ ನಡುವೆ ಆಗಿರುವ ಒಪ್ಪಂದದ ಪ್ರಕಾರ ಫುಟ್‌ಬಾಲ್‌ ಫೆಡರೇಷನ್‌ಗೆ, ವಾಣಿಜ್ಯ ಪಾಲುದಾರನ ವರ್ಷಕ್ಕೆ ₹ 50 ಕೋಟಿ ಕೊಡಬೇಕಾಗುತ್ತದೆ. ‘ಫೆಡರೇಷನ್‌, ಇದುವರೆಗೆ ಐ–ಲೀಗ್ ಕ್ಲಬ್‌ಗಳಿಗೆ ₹ 2.5 ಕೋಟಿಯವರೆಗೆ ಬಹುಮಾನದ ಮೊತ್ತ ಬಾಕಿವುಳಿಸಿಕೊಂಡಿದೆ. ಒಟ್ಟಾರೆ ಬಾಕಿವುಳಿಸಿರುವ ಮೊತ್ತ ₹ 4 ಕೋಟಿ’ ಎಂದು ಎಐಎಫ್‌ಎಫ್‌ ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿದೆ. ಜನವರಿಯಿಂದ ತ್ರೈಮಾಸಿಕವಾಗಿ ನೀಡಬೇಕಾದ ಮೊತ್ತ ಪಾವತಿಯಾಗಿಲ್ಲ. ಬಾಕಿಯಿರಿಸಿರುವ ಹಣ ಪಾವತಿ ಮಾಡುವಂತೆ ಫೆಡರೇಷನ್‌ಗೆ ಕ್ಲಬ್‌ಗಳು ಮೇಲ್‌ ಕಳುಹಿಸುತ್ತಿವೆ. ಮಿನರ್ವ ಪಂಜಾಬ್‌ ಎಫ್‌ಸಿ ನಿತ್ಯ ಬರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಷಯ ದೃಢೀಕರಿಸಿದ ಚೆನ್ನೈ ಸಿಟಿ ತಂಡದ ಸಿಇಒ ರೋಹಿತ್‌ ರಮೇಶ್‌, ‘ಬಹುಮಾನ ಮೊತ್ತದ ಹಣ ಸಿಗಬಹುದೆಂಬ ವಿಶ್ವಾಸವಿದೆ. ಚೆನ್ನೈ ಸಿಟಿ ಚಾಂಪಿಯನ್‌ ಆಗಿ ಮೂರು ತಿಂಗಳಾಗಿದೆ’ ಎಂದು ಹೇಳಿದರು.

ಹಣಕಾಸಿನ ಬಿಕ್ಕಟ್ಟಿನ ಬಗ್ಗೆ ಕೇಳಿದಾಗ, ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ‘ಇದು ಫೆಡರೇಷನ್‌ಗೆ ಹೊಸ ವಿಷಯವೇನಲ್ಲ’ ಎಂದು ಪ್ರತಿಕ್ರಿಯಿಸಿದರು. ‘ಎಐಎಫ್‌ಎಫ್‌ ಆರ್ಥಿಕ ಸಮಸ್ಯೆಯಿಂದ ಪರದಾಡುತ್ತಿದೆ. ಹೇಗೊ ಹಣಕಾಸು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ಹಲವು ಚಟುವಟಿಕೆ ನಡೆಸುತ್ತಿದ್ದೇವೆ. ಯೂತ್‌ ಲೀಗ್‌, ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ರಾಷ್ಟ್ರೀಯ ತಂಡಕ್ಕೂ ಟೂರ್ನಿ ನಡೆಯುತ್ತಿದೆ. ಇಂಟರ್‌ ಕಾಂಟಿನೆಂಟಲ್‌ ಕಪ್‌ ಪ್ರತಿವರ್ಷ ನಡೆಯುತ್ತಿದೆ. ರಾಷ್ಟ್ರೀಯ ತಂಡ ಪ್ರತಿ ವರ್ಷ 10 ರಿಂದ 12 ಪಂದ್ಯಗಳನ್ನು ಆಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.