ಡಿ.ಗುಕೇಶ್ ಹಾಗೂ ಮ್ಯಾಗ್ನಸ್ ಕಾರ್ಲ್‌ಸನ್
ಪಿಟಿಐ ಚಿತ್ರ
ಸ್ಟಾವೆಂಜರ್ (ನಾರ್ವೆ): ನಾರ್ವೆ ಚೆಸ್ ಟೂರ್ನಿಯ 9ನೇ ಸುತ್ತಿನಲ್ಲಿ ಚೀನಾದ ವೀ ಯಿ ಅವರನ್ನು ಮಣಿಸಿದ ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್, ಜಯದ ಹಳಿಗೆ ಮರಳಿದರು. ಮೂರು ಪೂರ್ಣ ಅಂಕಗಳನ್ನು ಗಳಿಸುವ ಮೂಲಕ, ಪ್ರತಿಷ್ಠಿತ ಟೂರ್ನಿಯಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಪ್ರಬಲ ಪೈಪೋಟಿಯೊಡ್ಡುತ್ತಿದ್ದಾರೆ.
ಇನ್ನೊಂದು ಸುತ್ತಿನ ಸ್ಪರ್ಧೆ ಬಾಕಿ ಇದ್ದು, ಗುಕೇಶ್ ಸದ್ಯ 14.5 ಅಂಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ಕಾರ್ಲ್‌ಸನ್ ಬಳಿ 15 ಅಂಕಗಳಿವೆ. ಅಮೆರಿಕದ ಹಿಕಾರು ನಕಮುರಾ (13 ಅಂಕ), ಅಮೆರಿಕದ ಫ್ಯಾಬಿಯಾನೊ ಕರುವಾನಾ (12.5 ಅಂಕ), ಭಾರತದ ಅರ್ಜುನ್ ಇರಿಗೇಶಿ (11.5 ಅಂಕ), ಚೀನಾದ ವೀ ಯಿ (8 ಅಂಕ) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
ಪ್ರಶಸ್ತಿ ಮತ್ತು ಅಂದಾಜು ₹ 59 ಲಕ್ಷ (69,000 ಡಾಲರ್) ಬಹುಮಾನದ ಮೇಲೆ ಕಣ್ಣಿಟ್ಟಿರುವ ಗುಕೇಶ್ ಹಾಗೂ ಕಾರ್ಲ್‌ಸನ್ ಅವರು, ನಿರ್ಣಾಯಕ 10ನೇ ಸುತ್ತಿನಲ್ಲಿ ಕ್ರಮವಾಗಿ ಕರುವಾನಾ ಮತ್ತು ಇರಿಗೇಶಿ ಅವರ ಸವಾಲು ಎದುರಿಸಲಿದ್ದಾರೆ.
ಈ ಪೈಪೋಟಿಯಲ್ಲಿ ಕಾರ್ಲ್‌ಸನ್ ಗೆದ್ದರೆ, ಅವರಿಗೆ ನಾರ್ವೆ ಚೆಸ್ ಟೂರ್ನಿಯಲ್ಲಿ 7ನೇ ಟ್ರೋಫಿ ಒಲಿಯಲಿದೆ. ಗುಕೇಶ್ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿರುವ ಹಿಕಾರು ಅವರಿಗೂ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಆದರೆ, ಅದಕ್ಕಾಗಿ ಇತರ ಪಂದ್ಯಗಳ ಫಲಿತಾಂಶಗಳೂ ಅವರ ಪರವಾಗಿ ಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.