ಡಿ.ಗುಕೇಶ್
(ಪಿಟಿಐ ಚಿತ್ರ)
ವಿಯ್ಕ್ ಆನ್ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ನಂತರ ಡಿ.ಗುಕೇಶ್ ಅವರಿಗೆ ಮೊದಲ ಸತ್ವ ಪರೀಕ್ಷೆ ಎದುರಾಗುತ್ತಿದೆ. ‘ಚೆಸ್‌ನ ವಿಂಬಲ್ಡನ್’ ಎಂದೇ ಹೆಸರಾಗಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿ ಶುಕ್ರವಾರ ಇಲ್ಲಿ ಆರಂಭವಾಗುತ್ತಿದ್ದು, ಮೊದಲ ಬಾರಿ ಭಾರತದ ಐವರು ಕಣದಲ್ಲಿದ್ದಾರೆ.
ಸಿಂಗಪುರದಲ್ಲಿ ಡಿಂಗ್ ಲಿರೆನ್ ಅವರನ್ನು 14 ಪಂದ್ಯಗಳ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಸೋಲಿಸಿ ಚಾಂಪಿಯನ್ ಆದ ನಂತರ ಗುಕೇಶ್ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ವಿಶ್ವ ಬ್ಲಿಟ್ಜ್ ಮತ್ತು ರ‍್ಯಾಪಿಡ್ ಟೂರ್ನಿಯಿಂದ ಅವರು ಹಿಂದೆಸರಿದಿದ್ದರು.
14 ಆಟಗಾರರಿ ಭಾಗವಹಿಸುತ್ತಿರುವ 13 ಸುತ್ತುಗಳ ಈ ಟೂರ್ನಿಯ ‘ಪೇರಿಂಗ್’ (ಮುಖಾಮುಖಿ ಡ್ರಾ) ಅನ್ನು ಶುಕ್ರವಾರ ನಡೆಸಲಾಗುವುದು. ವಿಶ್ವದ ನಾಲ್ಕನೇ ಕ್ರಮಾಂಕದ ಹಾಗೂ ಭಾರತದ ಅಗ್ರ ರ್‍ಯಾಂಕಿನ ಆಟಗಾರ ಅರ್ಜುನ್ ಇರಿಗೇಶಿ ಕೂಡ ಕಣದಲ್ಲಿದ್ದಾರೆ. ಆರ್.ಪ್ರಜ್ಞಾನಂದ, ಪಿ.ಹರಿಕೃಷ್ಣ ಮತ್ತು ಲಿಯಾನ್ ಲ್ಯೂಕ್ ಮೆಂಡೊನ್ಸಾ ಕಣದಲ್ಲಿರುವ ಭಾರತದ ಇತರ ಮೂವರು. ಕಳೆದ ಬಾರಿ ಈ ಟೂರ್ನಿಯ ಚಾಲೆಂಜರ್ಸ್ ವಿಭಾಗದಲ್ಲಿ ಲಿಯಾನ್ ವಿಜೇತರಾಗಿದ್ದರು.
ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಇತ್ತೀಚೆಗೆ ಮದುವೆಯಾಗಿದ್ದು ಅವರು ಭಾಗವಹಿಸುತ್ತಿಲ್ಲ. ಮೂರನೇ ಕ್ರಮಾಂಕದ ಹಿಕಾರು ನಕಾಮುರಾ ಕೂಡ ಕಣದಲ್ಲಿಲ್ಲ. ಅಮೆರಿಕದ ಫ್ಯಾಬಿಯಾನೊ ಕರುವಾನ ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ. ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಮತ್ತು ಹಾಲಿ ಚಾಂಪಿಯನ್ ವಿ ಯಿ (ಚೀನಾ) ಅವರೂ ಭಾಗವಹಿಸುತ್ತಿದ್ಗದಾರೆ.
2024ರಲ್ಲಿ ಗುಕೇಶ್ ಅವರು ಪ್ರಶಸ್ತಿ ಸನಿಹದಲ್ಲಿದ್ದರು. ಆದರೆ ಅಲ್ಪಾವಧಿ ಟೈಬ್ರೇಕರ್‌ನಲ್ಲಿ ಚೀನಾದ ವಿ ಅವರಿಗೆ ಸೋತಿದ್ದರು. ವಿಶ್ವ ಚಾಂಪಿಯನ್‌ಷಿಪ್ ವೇಳೆ ಗುಕೇಶ್ ಅವರಿಗೆ ನೆರವು ತಂಡದಲ್ಲಿದ್ದ ವಿನ್ಸೆಂಟ್ ಕೀಮರ್ (ಜರ್ಮನಿ) ಸಹ ಕಣದಲ್ಲಿದ್ದಾರೆ.
ಚಾಲೆಂಜರ್ಸ್ ವಿಭಾಗದಲ್ಲಿ ಭಾರತದ ದಿವ್ಯಾ ದೇಶಮುಖ್, ಆರ್.ವೈಶಾಲಿ ಭಾಗವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.