ಸೇಂಟ್ ಲೂಯಿ (ಅಮೆರಿಕ): ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಮೊದಲ ಸುತ್ತಿನಲ್ಲಿ ಲೆವೋನ್ ಅರೋನಿಯನ್ ಅವರಿಗೆ ಸೋತರೂ ನಂತರದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ, ಸೇಂಟ್ ಲೂಯಿ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯ ಮೂರನೇ ಸುತ್ತಿನ ನಂತರ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಹತ್ತು ಆಟಗಾರರು ಕಣದಲ್ಲಿರುವ ಈ ಟೂರ್ನಿಯ ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿದೆ. ಗುಕೇಶ್, ಅಮೆರಿಕದ ಅರೋನಿಯನ್ ಎದುರು ಸೋತ ನಂತರ ಚೇತರಿಸಿಕೊಂಡು ಗ್ರಿಗೊರಿ ಒಪಾರಿನ್ ಮತ್ತು ಲೀಮ್ ಲೆ ಕ್ವಾಂಗ್ ಅವರನ್ನು ಸೋಲಿಸಿದರು. ಸೋಮವಾರ ಅವರ ಸಂಭವನೀಯತ ಆರು ಪಾಯಿಂಟ್‌ಗಳಲ್ಲಿ ನಾಲ್ಕು ಪಾಯಿಂಟ್ಸ್ ಪಡೆದಿದ್ದಾರೆ.
ಅರೋನಿಯನ್ ಮೊದಲ ದಿನ ಆಡಿದ ಎಲ್ಲ ಮೂರೂ ಪಂದ್ಯಗಳನ್ನು ಜಯಿಸಿ ಅಗ್ರಸ್ಥಾನಕ್ಕೇರಿದರು.
ಇತ್ತೀಚೆಗಷ್ಟೇ ಲಾಸ್‌ವೇಗಸ್‌ನಲ್ಲಿ ಫ್ರೀಸ್ಟೈಲ್ ಚೆಸ್ ಟೂರ್ನಿ ಗೆದ್ದುಕೊಂಡಿದ್ದ ಅರೋನಿಯನ್, ನಂತರದ ಎರಡು ಪಂದ್ಯಗಳಲ್ಲಿ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿ ಪರಿಪೂರ್ಣ ಆರು ಅಂಕ ಸಂಪಾದಿಸಿದರು.
ಎರಡು ಪಂದ್ಯ ಗೆದ್ದು, ಒಂದು ಡ್ರಾ ಮಾಡಿಕೊಂಡ ಅಮೆರಿಕದ ಇನ್ನೊಬ್ಬ ಆಟಗಾರ ಫ್ಯಾಬಿಯಾನೊ ಕರುವಾನ ಅವರು ಎರಡನೆ ಸ್ಥಾನದಲ್ಲಿದ್ದಾರೆ. ಅಮೆರಿಕದ ಮತ್ತೊಬ್ಬ ಆಟಗಾರ ವೆಸ್ಲಿ ಸೊ ಮತ್ತು ಗುಕೇಶ್ ಮೂರನೆ ಸ್ಥಾನದಲ್ಲಿದ್ದಾರೆ. ವೇಷಿಯರ್ ಲಗ್ರಾವ್ ಮತ್ತು ಲೀನಿಯರ್ ಡೊಮಿಂಗೆಝ್ ಪೆರೆಝ್ ಅವರು ತಲಾ 3 ಅಂಕ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.
ಲೀಮ್ ಒಪಾರಿನ್ ಎರಡು ಪಾಯಿಂಟ್, ನದಿರ್ಬೆಕ್ ಒಂದು ಪಾಯಿಂಟ್ ಗಳಿಸಿದ್ದಾರೆ. ಸ್ಯಾಮ್ ಶಂಕ್ಲಾಂಡ್ ಆಡಿದ ಮೂರೂ ಪಂದ್ಯ ಸೋತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.