ಪ್ಯಾರಿಸ್: ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್‌ಅನ್ನು ಗೋಲಾಗಿ ಪರಿವರ್ತಿಸಿ ಭಾರತ ತಂಡದ ಪಾಲಿಗೆ ಮತ್ತೊಮ್ಮೆ ಆಪತ್ಬಾಂಧವರಾದರು. ಈ ಗೋಲಿನಿಂದ ಅರ್ಜೆಂಟೀನಾ ವಿರುದ್ಧ ಸೋಮವಾರ ಒಲಿಂಪಿಕ್ಸ್ ಹಾಕಿ ‘ಬಿ’ ಗುಂಪಿನ ಪಂದ್ಯವನ್ನು ಭಾರತ 1–1 ‘ಡ್ರಾ’ ಮಾಡಿಕೊಳ್ಳುವಲ್ಲಿ ಸಫಲವಾಯಿತು.
ಪಂದ್ಯದಲ್ಲಿ ಭಾರತ ಒಂಬತ್ತು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೂ ಗೋಲು ಗಳಿಸಲು ವಿಫಲವಾಯಿತು. ಆದರೆ ಹರ್ಮನ್‌ಪ್ರೀತ್ ಕೊನೆಯದಾಗಿ ದೊರೆತ ಅವಕಾಶದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಹೊಡೆದಟ್ಟಿದರು.
36ನೇ ನಿಮಿಷ ದೊರೆತ ಪೆನಾಲ್ಟಿ ಸ್ಟ್ರೋಕ್ ವ್ಯರ್ಥಗೊಳಿಸಿದ್ದಕ್ಕೆ ಅರ್ಜೆಂಟೀನಾ ಕೈಕೈ ಹಿಸುಕಿಕೊಳ್ಳುವಂತಾಯಿತು.
ಪಂದ್ಯದ 22ನೇ ನಿಮಿಷ ಲುಕಾಸ್ ಮಾರ್ಟಿನೆಝ್ ಫೀಲ್ಡ್ ಗೋಲಿನ ಮೂಲಕ ಅರ್ಜೆಂಟೀನಾಕ್ಕೆ ಮುನ್ನಡೆ ಒದಗಿಸಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ‘ಪೆನಾಲ್ಟಿ ಸ್ಟ್ರೋಕ್’ನಲ್ಲಿ ಗೋಲು ಗಳಿಸಿದ್ದ ಹರ್ಮನ್‌ಪ್ರೀತ್ ಈ ಬಾರಿ, ಅಂಪೈರ್ ಮುಕ್ತಾಯದ ಸೀಟಿ ಊದಲು ಅಣಿಯಾಗುತ್ತಿದ್ದಂತೆ ಗೋಲು ಗಳಿಸಿದ್ದರಿಂದ ತಂಡ ನಿಟ್ಟುಸಿರುಬಿಟ್ಟಿತು.
ಆದರೆ ಹರ್ಮನ್‌ಪ್ರೀತ್ ಪ್ರಕಾರ ತಂಡದ ಪ್ರದರ್ಶನ ಅಷ್ಟೇನೂ ಕೆಟ್ಟದಾಗಿರಲಿಲ್ಲ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡೆವು. ಪ್ರತಿದಾಳಿಗೂ ಅವಕಾಶಗಳಿದ್ದವು. ಫಿನಿಷಿಂಗ್ ಕಡೆ ನಾವು ಹೆಚ್ಚಿನ ಶ್ರಮ ಹಾಕಬೇಕಿದೆ. ಮುಂದೆ ನಾವು ಇದನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ’ ಎಂದು ಅವರು ‘ಪಿಟಿಐ’ಗೆ ತಿಳಿಸಿದರು.
ಅರ್ಜೆಂಟೀನಾ ರಕ್ಷಣಾ ವಿಭಾಗವನ್ನು ಅವರು ಶ್ಲಾಘಿಸಿದರು. ‘ಇದು ನಾವು ಕಲಿಯಬೇಕಾದ ವಿಷಯ. ಈ ಪಂದ್ಯ ನಮಗೆ ಒಳ್ಳೆಯ ಪಾಠವಾಯಿತು’ ಎಂದೂ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಅರ್ಜೆಂಟೀನಾ, ಈ ಪಂದ್ಯ ಗೆಲ್ಲಲು ಇನ್ನಿಲ್ಲದ ಶ್ರಮ ಹಾಕಿತು. ಆದರೆ ಪಂದ್ಯದ ಬಹುಭಾಗ ಮೇಲುಗೈ ಸಾಧಿಸಿದರೂ ಅಂತಿಮವಾಗಿ ‘ಡ್ರಾ’ಕ್ಕೆ ತೃಪ್ತಿಪಡಬೇಕಾಯಿತು.
ಮೊದಲ ಕ್ವಾರ್ಟರ್ ಗೋಲುರಹಿತರವಾಗಿತ್ತು. ಎರಡೂ ತಂಡಗಳು ದೊರೆತ ಶಾರ್ಟ್ ಕಾರ್ನರ್‌ಗಳನ್ನು ಬಂಡವಾಳ ಮಾಡಿಕೊಳ್ಳಲು ಆಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲೂ ಭಾರತಕ್ಕೆ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಆದರೆ ಅರ್ಜೆಂಟೀನಾದ ಗೋಲ್ ಕೀಪರ್ ಥಾಮಸ್ ಸಾಂಟಿಯಾಗೊ ಭಾರತದ ಯತ್ನಗಳಿಗೆ ಗೋಡೆಯಾದರು. ಒಮ್ಮೆ ಹರ್ಮನ್‌ಪ್ರೀತ್ ಅವರು ಶಕ್ತಿಶಾಲಿಯಾಗಿ ಗೋಲಿನತ್ತ ಹೊಡೆದ ಚೆಂಡನ್ನು ಅವರು ಬಲಗಾಲಿನಿಂದ ಆಚೆ ತಳ್ಳಿ ಅಪಾಯ ದೂರಮಾಡಿದರು.
ಈ ಅವಧಿಯಲ್ಲೇ ಅರ್ಜೆಂಟೀನಾ ಕೊನೆಗೂ ಗೋಲು ಖಾತೆ ತೆರೆಯಿತು. ಬಾಟಿಸ್ಟಾ ಜುಬೇಲ್ಡಿಯಾ ಕಪುರೊ ಅವರು ಬಲಗಡೆಯಿಂದ ಕಳುಹಿಸಿದ ಪಾಸ್‌ನಲ್ಲಿ ಮಾರ್ಟಿನೆಜ್ ‘ಡಿ’ ಒಳಗಿಂದ ಒಂದೇ ಹೊಡೆತಕ್ಕೆ ಚೆಂಡನ್ನು ಗೋಲಿನೊಳಗೆ ಕಳುಹಿಸಿದರು. ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರು ಡೈವ್ ಮಾಡುವಷ್ಟರಲ್ಲಿ ಗೋಲಾಗಿತ್ತು. ನಂತರದ ಆಟ ಭಾರತದ ಗೋಲು ಕಡೆಯೇ ಸಾಗಿತು. ರಿಯೊ ಕ್ರೀಡೆಗಳ(2016) ಚಾಂಪಿಯನ್ನರು ವಿರಾಮದ ವೇಳೆ 1–0 ಮುನ್ನಡೆ ಉಳಿಸಿಕೊಂಡರು.
36ನೇ ನಿಮಿಷ ಆರ್ಜೆಂಟೀನಾ ತಂಡದ ಕಾಸೆಲ್ಲಾ ಶುತ್ ಅವರು ‘ಪೆನಾಲ್ಟಿ’ ಅವಕಾಶದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯ ಆಚೆ ಹೊಡೆದಿದ್ದು ದುಬಾರಿಯಾಯಿತು.
‘ಇದು ನಮಗೆ ಪುನರಾಗಮನ ಆರಂಭ ಎಂದು ಹೇಳಬಹುದು. ನಾವು ಅಲ್ಲಿಂದ ವಿಶ್ವಾಸ ಗಳಿಸಿ ಗೋಲಿಗೆ ಪ್ರಯತ್ನಿಸುತ್ತ ಹೋದೆವು. ಒಂದೊಮ್ಮೆ 0–2 ಹಿನ್ನಡೆಯಾಗಿದ್ದಲ್ಲಿ ಕಥೆ ಬೇರೆಯಾಗುತಿತ್ತೇನೋ?’ ಎಂದು ಹರ್ಮನ್‌ಪ್ರೀತ್ ಪ್ರತಿಕ್ರಿಯಿಸಿದರು.
ಕೊನೆಯ ಕ್ವಾರ್ಟರ್‌ನಲ್ಲಂತೂ ಭಾರತ ಹೆಚ್ಚಿನ ದಾಳಿ ನಡೆಸಿ ಒತ್ತಡ ಹೇರಿತು. ಭಾರತ ಈ ಬಾರಿ ಮೊದಲ ಸೋಲು ಕಾಣಬಹುದು ಎನ್ನುವಾಗಲೇ ಹರ್ಮನ್ ಗಳಿಸಿದ ಗೋಲು ಅರ್ಜೆಂಟೀನಾ ಲೆಕ್ಕಾಚಾರ ತಲೆಕೆಳಗು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.