ADVERTISEMENT

ಏಷ್ಯನ್ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಭಾರತದ ಹರ್ಷದಾಗೆ ಚಿನ್ನ

ಪಿಟಿಐ
Published 19 ಜುಲೈ 2022, 10:54 IST
Last Updated 19 ಜುಲೈ 2022, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಯುವ ವೇಟ್‌ಲಿಫ್ಟರ್ ಹರ್ಷದಾ ಗರುಡ್‌ ಅವರು ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

ಮಂಗಳವಾರ ನಡೆದ ಮಹಿಳೆಯರ 45 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 157 ಕೆ.ಜಿ (69 ಕೆ.ಜಿ+ 88 ಕೆ.ಜಿ) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು. 18 ವರ್ಷದ ಹರ್ಷದಾ, ಮೇ ತಿಂಗಳಲ್ಲಿ ನಡೆದಿದ್ದ ಜೂನಿಯರ್‌ ವಿಶ್ವಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಜಯಿಸಿದ್ದರು. ಅಲ್ಲಿ ನೀಡಿದ್ದ ಪ್ರದರ್ಶನಕ್ಕಿಂತ (ಒಟ್ಟು 153 ಕೆ.ಜಿ) ನಾಲ್ಕು ಕೆ.ಜಿಯಷ್ಟು ಅಧಿಕ ಭಾರ ಎತ್ತುವಲ್ಲಿ ಯಶಸ್ವಿಯಾದರು.

ಭಾರತದ ಸೌಮ್ಯಾ ದಳವಿ ಅವರು 45 ಕೆ.ಜಿ. ಯೂತ್‌ ವಿಭಾಗದಲ್ಲಿ ಕಂಚು ಜಯಿಸಿದರು. ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಗೆದ್ದಿದ್ದ ಅವರು ಒಟ್ಟು 145 ಕೆ.ಜಿ. ಸಾಧನೆ ಮಾಡಿದರು.

ADVERTISEMENT

ಪುರುಷರ 49 ಕೆ.ಜಿ. ಯೂತ್‌ ವಿಭಾಗದ ಸ್ನ್ಯಾಚ್‌ನಲ್ಲಿ ಎಲ್‌.ಧನುಷ್‌ 85 ಕೆ.ಜಿ ಸಾಧನೆಯೊಂದಿಗೆ ಕಂಚು ಜಯಿಸಿದರು. ಆದರೆ ಒಟ್ಟಾರೆಯಾಗಿ ಅವರು 185 ಕೆ.ಜಿ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡರು.

ಈ ಚಾಂಪಿಯನ್‌ಷಿಪ್‌ನಲ್ಲಿ ಸ್ನ್ಯಾಚ್‌, ಕ್ಲೀನ್‌ ಮತ್ತು ಜರ್ಕ್‌ ಹಾಗೂ ಒಟ್ಟಾರೆ ಸಾಧನೆಗೆ ಪ್ರತ್ಯೇಕವಾಗಿ ಪದಕಗಳನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.