
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನೊಯ್ಡಾ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ನಡೆದಿರುವ ಎಚ್‌ಸಿಎಲ್ ಸೈಕ್ಲೊಥಾನ್ ಈಗ ಬೆಂಗಳೂರಿನಲ್ಲೂ ಮೊದಲ ಬಾರಿ ನಡೆಯಲಿದೆ. ಮುಂದಿನ ಫೆಬ್ರುವರಿ 8ರಂದು ಬೆಂಗಳೂರಿನ ನೈಸ್ ರಸ್ತೆಯಲ್ಲಿ ಈ ಸೈಕ್ಲೊಥಾನ್ ಆಯೋಜನೆಯಾಗಲಿದೆ.
ಎಚ್‌ಸಿಎಲ್ ಸಮೂಹವು, ಭಾರತ ಸೈಕ್ಲಿಂಗ್ ಫೆಡರೇಷನ್ ಸಹಯೋಗದಲ್ಲಿ ಈ ಸೈಕ್ಲೊಥಾನ್ ಆಯೋಜಿಸುತ್ತಿದೆ. ವೃತ್ತಿಪರ, ಹವ್ಯಾಸಿ ಮತ್ತು ಜನಪ್ರಿಯ ಗ್ರೀನ್ ರೈಡ್ – ಈ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಎಚ್‌ಸಿಎಲ್ ಗ್ರೂಪ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಮತ್ತು ಬ್ರಾಂಡ್ ಮುಖ್ಯಸ್ಥ ರಜತ್ ಚಾಂದೋಲಿಯಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
18 ರಿಂದ 35 ವಯೊಮಿತಿಯ ವೃತ್ತಿಪರರಿಗೆ (ಸಿಎಫ್‌ಐ ಪರವಾನಿಗೆ ಹೊಂದಿರುವ) 50 ಕಿ.ಮೀ. ರೋಡ್ ರೇಸ್ ನಿಗದಿಪಡಿಸಲಾಗಿದೆ. ಹವ್ಯಾಸಿಗಳಿಗೆ (18–30 ವರ್ಷ, 30–40 ವರ್ಷ, 40–50 ವರ್ಷ, +50) ವಿಭಾಗಗಳ ಪುರುಷರು ಮತ್ತು ಮಹಿಳೆಯರಿಗೆ 50 ಕೀ.ಮೀ. ರೋಡ್ ರೇಸ್ ಇರಲಿದೆ. ಜೊತೆಗೆ 32 ಕಿ.ಮೀ. ಎಂಟಿಬಿ (ಮೌಂಟನ್ ಬೈಕ್) ರೇಸ್ ಇರಲಿದೆ.
ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ, ಜೊತೆಗೆ ಹವ್ಯಾಸಿ ವಿಭಾಗದಲ್ಲಿ ವಿವಿಧ ವಯೋವರ್ಗಗಳ ವಿಜೇತರಿಗೆ ಒಟ್ಟು ₹30 ಲಕ್ಷ ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದರು.
ಹೊಸದಾಗಿ ಪಾಲ್ಗೊಳ್ಳುವ ಉತ್ಸಾಹಿಗಳು (16 ವರ್ಷ ಮೇಲ್ಪಟ್ಟವರು) ಗ್ರೀನ್ ರೈಡ್ ವಿಭಾಗದಲ್ಲಿ ಪಾಲ್ಗೊಳ್ಳಬಹುದಾಗಿದ್ದು, 16 ಕಿ.ಮೀ. ನಿಗದಿಪಡಿಸಲಾಗಿದೆ.
www.hclcyclothon.com ನಲ್ಲಿ ಹೆಸರು ನೋಂದಾಯಿಸಬಹುದು. ಜನವರಿ 26ರವರೆಗೆ ಅವಕಾಶವಿದೆ.
‘ಎಚ್‌ಸಿಎಲ್ ಸ್ಪರ್ಧೆ ಆಯೋಜಿಸುತ್ತಿರುವ ಕಾರಣ ಹೊಸ ಪ್ರತಿಭೆಗಳನ್ನು ಕಂಡುಕೊಳ್ಳಲು ನೆರವಾಗಲಿದೆ. ಭಾರತದಲ್ಲಿ ಸೈಕ್ಲಿಂಗ್ ಸ್ಪರ್ಧೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯೋನ್ಮುಖವಾಗಿದೆ’ ಎಂದು ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿ ಮಣೀಂದರ್ ಸಿಂಗ್ ತಿಳಿದಿರು.
ಪತ್ರಿಕಾಗೋಷ್ಠಿಯಲ್ಲಿ 9 ಬಾರಿಯ ರಾಷ್ಟ್ರೀಯ ಚಾಂಪಿಯನ್ ಹಾಗೂ ಎಚ್‌ಸಿಎಲ್ ಮೊದಲ ಸೈಕ್ಲೊಥಾನ್ ರನ್ನರ್ ಅಪ್ ನವೀನ್ ಜಾನ್ ಅವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.