ADVERTISEMENT

ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್‌: ಮೊದಲ ಗೆಲುವು ದಾಖಲಿಸಿದ ಎಸ್‌ಜಿ ಪೈಪರ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 15:42 IST
Last Updated 13 ಜನವರಿ 2026, 15:42 IST
   

ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್‌ನಲ್ಲಿ ಎಸ್‌ಜಿ ಪೈಪರ್ಸ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ಹೈದರಾಬಾದ್ ತೂಫಾನ್ಸ್ ತಂಡವನ್ನು 2-1 ಅಂತರದಿಂದ ಮಣಿಸಿತು.

ಎಸ್‌ಜಿ ಪೈಪರ್ಸ್ ಪರ ಥಾಮಸ್ ಡೊಮೇನೇ (8 ಮತ್ತು 29ನೇ ನಿಮಿಷ) ಎರಡು ಗೋಲುಗಳನ್ನು ದಾಖಲಿಸಿದರೆ, ಹೈದರಾಬಾದ್ ತೂಫಾನ್ಸ್ ಪರ ಅಮನ್ದೀಪ್ ಲಕ್ರಾ (41) ಏಕೈಕ ಗೋಲು ಬಾರಿಸಿದರು.

ಪಂದ್ಯದ ಆರಂಭದಲ್ಲೇ ಎಸ್‌ಜಿ ಪೈಪರ್ಸ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಎರಡನೇ ನಿಮಿಷದಲ್ಲಿ ದಿಲ್ರಾಜ್ ಸಿಂಗ್ ಅವರು ಏರಿಯಲ್ ಬಾಲ್ ಅನ್ನು ಅದ್ಭುತವಾಗಿ ನಿಯಂತ್ರಿಸಿ ಪೆನಾಲ್ಟಿ ಕಾರ್ನರ್ ಗೆದ್ದರು. ಆದರೆ ಹೈದರಾಬಾದ್ ಗೋಲ್‌ಕೀಪರ್ ಜಾನ್-ಪಾಲ್ ಡಾನೆಬರ್ಗ್ ಅವರು ಡೊಮೇನೇ ಅವರ ಎರಡು ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾದರು.

ADVERTISEMENT

ಕ್ಯಾಪ್ಟನ್ ಜರ್ಮನ್‌ಪ್ರೀತ್ ಸಿಂಗ್ ಅವರ ನೇತೃತ್ವದಲ್ಲಿ ಬಲಭಾಗದಿಂದ ದಾಳಿ ಮುಂದುವರಿಸಿದ ಪೈಪರ್ಸ್, ತಮ್ಮ ನಾಲ್ಕನೇ ಪೆನಾಲ್ಟಿ ಕಾರ್ನರ್ ಅನ್ನು ಗಳಿಸಿದರು.

ಆಟದ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದ್ದ ಎಸ್‌ಜಿ ಪೈಪರ್ಸ್, ಎಂಟನೇ ನಿಮಿಷದಲ್ಲಿ ಮುನ್ನಡೆ ಪಡೆದರು. ಜೇಕಬ್ ಡ್ರೇಪರ್ ಅವರ ಪಾಸ್ ಅನ್ನು ರಹೀಮ್ ಸಯ್ಯದ್ ಅಪಾಯಕಾರಿಯಾಗಿ ಎತ್ತಿದ ಪರಿಣಾಮ ಪೈಪರ್ಸ್ ಐದನೇ ಪೆನಾಲ್ಟಿ ಕಾರ್ನರ್ ಪಡೆದರು.

13ನೇ ನಿಮಿಷದಲ್ಲಿ ತೂಫಾನ್ಸ್ ಸಮಬಲ ಸಾಧಿಸುವ ಹಂತಕ್ಕೆ ಬಂದರೂ, ಟೊಮಾಸ್ ಸ್ಯಾಂಟಿಯಾಗೋ ಅವರು ಟಿಮ್ ಬ್ರಾಂಡ್ ಅವರ ಟೊಮಹಾಕ್ ಶಾಟ್ ಹಾಗೂ ನಂತರ ಮಿಚೆಲ್ ಸ್ಟ್ರುಥಾಫ್ ಅವರ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾದರು.

ಎರಡನೇ ಕ್ವಾರ್ಟರ್‌ನಲ್ಲಿ ಗೋಲ್‌ಪೋಸ್ಟ್ ನಡುವೆ ಪವನ್ ಅವರನ್ನು ಕರೆತಂದು ಪೈಪರ್ಸ್ ರಕ್ಷಣಾತ್ಮಕ ತಂತ್ರ ಅನುಸರಿಸಿದರು. ಜರ್ಮನ್‌ಪ್ರೀತ್ ಸಿಂಗ್ ಅವರಿಗೆ ಗ್ರೀನ್ ಕಾರ್ಡ್ ದೊರಕಿದ ನಂತರ ತೂಫಾನ್ಸ್ ಮೊದಲ ಪೆನಾಲ್ಟಿ ಕಾರ್ನರ್ ಗಳಿಸಿದರೂ, ಪೈಪರ್ಸ್ ರಕ್ಷಣೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.

29ನೇ ನಿಮಿಷದಲ್ಲಿ ರೋಮನ್ ಡುವೆಕೋಟ್ ಅವರ ಅದ್ಭುತ ಡ್ರಿಬ್ಲಿಂಗ್ ಬಳಿಕ ಡೊಮೇನೇ ಸುಲಭ ಟ್ಯಾಪ್-ಇನ್ ಮೂಲಕ ಎರಡನೇ ಗೋಲು ದಾಖಲಿಸಿದರು.

ಮೂರನೇ ಕ್ವಾರ್ಟರ್‌ನಲ್ಲಿ ಪೈಪರ್ಸ್ ಮತ್ತೊಂದು ಗೋಲುಗಾಗಿ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. 40ನೇ ನಿಮಿಷದಲ್ಲಿ ರಾಜಿಂದರ್ ಸಿಂಗ್ ಅವರ ಬಲವಾದ ಶಾಟ್ ಅನ್ನು ಸ್ಯಾಂಟಿಯಾಗೋ ಅದ್ಭುತವಾಗಿ ತಡೆದರು. ಆದರೆ ಒಂದು ನಿಮಿಷದ ಬಳಿಕ ಅಮನ್ದೀಪ್ ಲಕ್ರಾ ಗೋಲು ಬಾರಿಸಿ ತೂಫಾನ್ಸ್ ತಂಡವನ್ನು ಮತ್ತೆ ಪಂದ್ಯಕ್ಕೆ ತಂದರು.

ಕೊನೆಯ ಕ್ಷಣಗಳಲ್ಲಿ ಕೂಡ ಸ್ಯಾಂಟಿಯಾಗೋ ಅವರು ಎರಡು ಅದ್ಭುತ ಸೇವ್‌ಗಳನ್ನು ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಎಸ್‌ಜಿ ಪೈಪರ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯವನ್ನು ಜನವರಿ 14ರಂದು ರಾಂಚಿಯಲ್ಲಿ ರಾಂಚಿ ರಾಯಲ್ಸ್ ವಿರುದ್ಧ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.