ADVERTISEMENT

ಅಧ್ಯಯನ, ಅಭ್ಯಾಸದ ಗೊಂದಲದಲ್ಲಿ ಹಿಮಾ ದಾಸ್‌

ಪಿಟಿಐ
Published 14 ಫೆಬ್ರುವರಿ 2019, 17:48 IST
Last Updated 14 ಫೆಬ್ರುವರಿ 2019, 17:48 IST
ಹಿಮಾ ದಾಸ್‌
ಹಿಮಾ ದಾಸ್‌   

ನವದೆಹಲಿ : ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ಮಿಂಚಿನ ಓಟದ ಮೂಲಕ ಹೆಸರು ಮಾಡಿರುವ ಹಿಮಾ ದಾಸ್‌ ಈಗ ಗೊಂದಲದಲ್ಲಿದ್ದಾರೆ. ಕ್ರೀಡಾ ಸಾಧನೆಯ ಜೊತೆಯಲ್ಲಿ ಅಭ್ಯಾಸದ ಬಗ್ಗೆಯೂ ಕಾಳಜಿ ಇರುವ ಅವರು ಪರೀಕ್ಷೆ ಮತ್ತು ಓಟದ ಅಭ್ಯಾಸದ ನಡುವೆ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿಲ್ಲ.

ಅಸ್ಸಾಂನ ನಾಗಾಂವ್‌ ಜಿಲ್ಲೆಯ ಕಂದುಲಿಮರಿ ಗ್ರಾಮದ ಹಿಮಾ ದಾಸ್‌ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆದ್ದ ನಂತರ ಬೆಳಕಿಗೆ ಬಂದ ಕ್ರೀಡಾ ಪ್ರಪಂಚದ ಗಮನ ಸೆಳೆದಿದ್ದರು. 2016ರಿಂದ ಪಾಲ್ಗೊಂಡ ಎಲ್ಲ ಕೂಟಗಳಲ್ಲೂ ಗಮನಾರ್ಹ ಸಾಧನೆ ಮಾಡಿದರು. ಕಳೆದ ವರ್ಷ ನಡೆದಿದ್ದ ಏಷ್ಯಾ ಕ್ರೀಡಾಕೂಟದಲ್ಲಿ 400 ಮೀಟರ್ಸ್ ಓಟದಲ್ಲಿ 50.79 ಸೆಕೆಂಡುಗಳ ಸಾಧನೆ ಮಾಡಿದ್ದರು.

ಬದುಕಿಗೆ ಶಿಕ್ಷಣವೂ ಅಗತ್ಯ ಎಂದು ಅಭಿಪ್ರಾಯಪಡುವ ಅವರು ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಷನ್ ಕೌನ್ಸಿಲ್‌ ಅಡಿಯಲ್ಲಿ 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷದಲ್ಲಿ ಪ್ರಮುಖ ಕೂಟಗಳಲ್ಲಿ ಸಾಧನೆ ಮಾಡುವುದರ ಕಡೆಗೂ ನೋಟ ಹರಿಸಿದ್ದಾರೆ.

ADVERTISEMENT

ಪರೀಕ್ಷೆಗಳು ಈ ತಿಂಗಳ 12ರಂದು ಆರಂಭಗೊಂಡಿದ್ದು ಮಾರ್ಚ್‌ ಮದ್ಯದ ವರೆಗೆ ನಡೆಯಲಿವೆ. ಹುಟ್ಟೂರಿನ ಧಿಂಗ್ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ ಬರೆಯಲು 120 ಕಿಲೋಮೀಟರ್ ದೂರದಲ್ಲಿರುವ ಗುವಾಹಟಿಯ ಸಾಯಿ ಕೇಂದ್ರದಿಂದ ನಿತ್ಯವೂ ಬಂದು ಹೋಗುತ್ತಿದ್ದಾರೆ.

‘ತರಬೇತಿಯ ಜೊತೆಯಲ್ಲೇ ಓದುವುದಕ್ಕಾಗಿ ಸಮಯ ನಿಗದಿ ಮಾಡಿಕೊಂಡಿದ್ದೇನೆ. ಮೊದಲ ಪರೀಕ್ಷೆಗಾಗಿ ಹಿಂದಿನ ದಿನ ಸಂಜೆ ಬಂದಿದ್ದೆ. ಪರೀಕ್ಷೆ ಮುಗಿದ ನಂತರ ವಾಪಸಾಗಿದ್ದೆ. ಮುಂದಿನ ಪರೀಕ್ಷೆ ಶನಿವಾರ ಇದ್ದು ಶುಕ್ರವಾರ ಸಂಜೆಯೇ ಹೊರಡಬೇಕಾಗಿದೆ’ ಎಂದು ಅವರು ತಿಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.