ADVERTISEMENT

ಹಾಕಿ: ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದ ಭಾರತ

ಪಿಟಿಐ
Published 5 ಅಕ್ಟೋಬರ್ 2021, 13:59 IST
Last Updated 5 ಅಕ್ಟೋಬರ್ 2021, 13:59 IST
ಹಾಕಿ ಇಂಡಿಯಾ ಲೋಗೊ
ಹಾಕಿ ಇಂಡಿಯಾ ಲೋಗೊ   

ನವದೆಹಲಿ: ಕೋವಿಡ್ ಬಿಕ್ಕಟ್ಟು ಮತ್ತು ದೇಶದ ನಾಗರಿಕರಿಗೆ ಇಂಗ್ಲೆಂಡ್‌ನಲ್ಲಿ ತೋರುತ್ತಿರುವ ಕ್ಯಾರಂಟೈನ್ ನಿಯಮಗಳಲ್ಲಿನ ತಾರತಮ್ಯವನ್ನು ಉಲ್ಲೇಖಿಸಿ ಭಾರತವು 2022ರ ಕಾಮನ್‌ವೆಲ್ತ್ ಗೇಮ್ಸ್ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿದಿದೆ.

ಹಾಕಿ ಇಂಡಿಯಾದ ಈ ನಿರ್ಧಾರವನ್ನು ಅಧ್ಯಕ್ಷ ಜ್ಞಾನೇಂದ್ರೊ ನಿಂಗೊಂಬಮ್ ಅವರು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ಅವರಿಗೆ ತಿಳಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ (ಜುಲೈ 28ರಿಂದ ಆಗಸ್ಟ್ 8)ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಚೀನಾದ ಹ್ಯಾಂಗ್‌ಜೊನಲ್ಲಿ ನಿಗದಿಯಾಗಿರುವ ಏಷ್ಯನ್ ಗೇಮ್ಸ್ (ಸೆಪ್ಟೆಂಬರ್ 10ರಿಂದ 25) ನಡುವೆ ಕೇವಲ 32-ದಿನದ ವಿರಾಮವಿದೆ. ಅಲ್ಲದೆ ಕೋವಿಡ್‌ನಿಂದ ಹೆಚ್ಚು ಬಾಧಿತವಾಗಿರುವ ದೇಶಗಳಲ್ಲಿ ಒಂದಾದ ಇಂಗ್ಲೆಂಡ್‌ಗೆ ತನ್ನ ಆಟಗಾರರನ್ನು ಕಳುಹಿಸುವ ಅಪಾಯವನ್ನು ಮೇಲೆಳೆದುಕೊಳ್ಳಲು ಬಯಸಿಲ್ಲ ಎಂದು ಹಾಕಿ ಇಂಡಿಯಾ ವಾದಿಸಿದೆ.

ADVERTISEMENT

ಇಂಗ್ಲೆಂಡ್‌ ಇತ್ತೀಚೆಗೆ ಭಾರತದ ಕೋವಿಡ್ ಲಸಿಕೆ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡಲು ನಿರಾಕರಿಸಿತ್ತು. ದೇಶದಿಂದ ತೆರಳುವ ಪ್ರಯಾಣಿಕರಿಗೆ, ಸಂಪೂರ್ಣ ಲಸಿಕೆ ಹಾಕಿದ್ದರೂ 10 ದಿನಗಳ ಕಠಿಣ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸುವ ನಿಯಮ ಜಾರಿ ಮಾಡಿತ್ತು.

ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯಲಿರುವ ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್‌ನಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಇಂಗ್ಲೆಂಡ್ ಪ್ರಕಟಿಸಿದ ಒಂದು ದಿನದ ನಂತರ ಹಾಕಿ ಇಂಡಿಯಾ ಈ ನಿರ್ಧಾರ ತಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.