ADVERTISEMENT

ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ ಹಾಕಿ ಆಟಗಾರ್ತಿ ಕುಟುಂಬಕ್ಕೆ ಜಾತಿ ನಿಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 8:06 IST
Last Updated 7 ಆಗಸ್ಟ್ 2021, 8:06 IST
ವಂದನಾ ಕಟಾರಿಯಾ
ವಂದನಾ ಕಟಾರಿಯಾ    

ಹರಿದ್ವಾರ (ಉತ್ತರಾಖಂಡ): ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರ ಕುಟುಂಬಕ್ಕೆ ಉತ್ತರಾಖಂಡದ ಹುಟ್ಟೂರು ಹರಿದ್ವಾರದ ಹಳ್ಳಿಯಲ್ಲಿ ಜಾತಿ ನಿಂದನೆಯಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬುಧವಾರ ಅರ್ಜೆಂಟೀನಾ ವಿರುದ್ಧ ಭಾರತ ಸೋತ ಕೆಲವೇ ಗಂಟೆಗಳಲ್ಲಿ, ಇಬ್ಬರು ಮೇಲ್ಜಾತಿಯ ಪುರುಷರು ವಂದನಾ ಕಟಾರಿಯಾ ಅವರ ಕುಟುಂಬವನ್ನು ಜಾತಿ ಉಲ್ಲೇಖಿಸಿ ನಿಂದೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ವಿಚಾರವನ್ನು ಹರಿದ್ವಾರದ ಪೊಲೀಸ್‌ ವರಿಷ್ಠಾಧಿಕಾರಿ ಸೆಂಥಿಲ್‌ ಅಬುದೈ ಕೃಷ್ಣರಾಜು ಅವರೂ ಖಚಿತಪಡಿಸಿದ್ದಾರೆ. ‘ಮಹಿಳಾ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಸಹೋದರನಿಂದ ನಮಗೆ ದೂರು ಬಂದಿದೆ. ಒಲಂಪಿಕ್ಸ್‌ ಸೋಲಿನ ನಂತರ ಕುಟುಂಬದ ವಿರುದ್ಧ ನೆರೆಹೊರೆಯವರು ಜಾತಿ ನಿಂದನೆ ಮಾಡಿರುವ ಬಗ್ಗೆ ಅವರು ದೂರು ಕೊಟ್ಟಿದ್ದಾರೆ. ಐಪಿಸಿ ಸೆಕ್ಷನ್ 504 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಆದರೆ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇನ್ನು, ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಮಹಿಳೆಯರ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌, ‘ವಂದನಾಳ ಕುಟುಂಬಕ್ಕೆ ಆಗಿರುವ ಜಾತಿ ನಿಂದನೆ ನಾಚಿಕೆಗೇಡಿನ ಕೃತ್ಯ. ಜನರು ಜಾತಿ ಸಂಕೋಲೆ ಮೀರಬೇಕು ಎಂದು ನಾನು ಹೇಳ ಬಯಸುತ್ತೇನೆ. ನಾವು ವಿಭಿನ್ನ ಧರ್ಮಗಳಿಂದ, ವಿವಿಧ ಭಾಗಗಳಿಂದ ಬಂದಿರಬಹುದು. ಆದರೆ, ಆಟವಾಡುವಾಗ ದೇಶಕ್ಕಾಗಿ, ನಮ್ಮ ಧ್ವಜಕ್ಕಾಗಿ ಆಡುತ್ತೇವೆ,‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.