ADVERTISEMENT

ಸಿಂಧು ಮುನ್ನಡೆ, ಸೈನಾ, ಸಮೀರ್‌ ನಿರ್ಗಮನ

ಹಾಂಗ್‌ಕಾಂಗ್‌ ಓಪನ್‌

ಪಿಟಿಐ
Published 13 ನವೆಂಬರ್ 2019, 19:53 IST
Last Updated 13 ನವೆಂಬರ್ 2019, 19:53 IST

ಹಾಂಗ್‌ಕಾಂಗ್‌: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು, ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನೇರ ಗೇಮ್‌ಗಳ ವಿಜಯದೊಡನೆ ಶುಭಾರಂಭ ಮಾಡಿದರು. ಆದರೆ ಸೈನಾ ನೆಹ್ವಾಲ್‌ ಮತ್ತು ಸಮೀರ್‌ ವರ್ಮಾ ಅವರು ಬುಧವಾರ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಇತ್ತೀಚಿನ ಟೂರ್ನಿಗಳಲ್ಲಿ ಹಿನ್ನಡೆ ಅನುಭವಿಸುತ್ತ ಬಂದಿರುವ ಆರನೇ ಶ್ರೇಯಾಂಕದ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಕೊರಿಯಾದ ಕಿಮ್‌ ಗ ಯುನ್‌ ಅವರನ್ನು 21–15, 21–16ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಸಿಂಧು ಅವರ ಮುಂದಿನ ಎದುರಾಳಿ ಥಾಯ್ಲೆಂಡ್‌ನ ಬುಸನನ್ ಒಂಗ್ಬಾಮ್‌ರಂಗಫಾನ್.

ಆದರೆ ಸೈನಾ ಸೋಲಿನ ಸರಪಣಿ ಮುಂದುವರಿದಿದೆ. ಎಂಟನೇ ಶ್ರೇಯಾಂಕದ ಭಾರತದ ಆಟಗಾರ್ತಿ 13–21, 20–22ರಲ್ಲಿ ಚೀನಾ ಕೈ ಯಾನ್‌ ಯಾನ್‌ ಅವರಿಗೆ ಸತತ ಎರಡನೇ ಬಾರಿ ಸೋತರು. ಸೈನಾ ಅವರು ಕಳೆದ ಆರು ಟೂರ್ನಿಗಳ ಪೈಕಿ ಐದರಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮನ ಕಂಡಿದ್ದಾರೆ.

ADVERTISEMENT

ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನದಲ್ಲಿರುವ ಸಮೀರ್‌ 11–21, 21–13, 8–21 ರಲ್ಲಿ ಚೀನಾ ರೈಪಿಯ ವಾಂಗ್‌ ತ್ಸು ವೀ ಅವರಿಗೆ 54 ನಿಮಿಷಗಳ ಸೆಣಸಾಟದಲ್ಲಿ ಮಣಿದರು. ಅವರು ಸತತ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.