ADVERTISEMENT

ಸಿಂಥೆಟಿಕ್‌ ಟ್ರ್ಯಾಕ್‌ ಉಳಿಸಲು ಇನ್ನೆಷ್ಟು ಹೋರಾಡಬೇಕು?

ಪ್ರಮೋದ ಜಿ.ಕೆ
Published 23 ಅಕ್ಟೋಬರ್ 2018, 19:46 IST
Last Updated 23 ಅಕ್ಟೋಬರ್ 2018, 19:46 IST
ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವುದು -ಚಿತ್ರ: ಬಿ.ಎಂ.ಕೇದಾರನಾಥ
ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವುದು -ಚಿತ್ರ: ಬಿ.ಎಂ.ಕೇದಾರನಾಥ   

ಹೋದ ವಾರ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಆ ವಿ.ವಿ.ಯ ಅಥ್ಲೀಟ್‌ಗಳಿಗೆ ಆಯೋಸಿದ್ದ ಚೊಚ್ಚಲ ಕ್ರೀಡಾಕೂಟ ಅದಾಗಿತ್ತು.

ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಮಹಿಳಾ ಅಥ್ಲೀಟ್‌ಗಳು ಹೇಗೆ ಓಡುತ್ತಾರೆ ಎಂಬುದನ್ನು ಕುತೂಹಲದಿಂದ ಅನೇಕ ಕ್ರೀಡಾಪ್ರೇಮಿಗಳು ನೋಡುತ್ತಿದ್ದರು. ಅದರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಹಿಂದಿನ ಮುಖ್ಯಸ್ಥ ರಾಗಿದ್ದ ಶಿವಕುಮಾರ ಅಗಡಿ ಅವರೂ ಒಬ್ಬರು. ಅಗಡಿ ಅವರು ಈಗ ಮಾತ್ರವಲ್ಲ, ಆರ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾಕೂಟ ನಡೆದರೂ ಅಲ್ಲಿರುತ್ತಾರೆ. ಯುವ ಕ್ರೀಡಾಪಟುಗಳ ಸಾಧನೆ ಕಣ್ತುಂಬಿಕೊಂಡು ಹುರಿದುಂಬಿಸುತ್ತಾರೆ.

ಸ್ಪರ್ಧಿಗಳನ್ನು ಪ್ರೋತ್ಸಾಹಿಸುವ ಕಾಯಕದನಡುವೆಯೇ‘ಮೆಟ್ರೊ’ ಜೊತೆ ಮಾತನಾಡುತ್ತಾ, ‘ಈ ಕ್ರೀಡಾಂಗಣ ಮುಂದೆಯೂ ಇದೇ ರೀತಿ ಕ್ರೀಡಾಕೂಟಗಳ ಆಯೋಜನೆಗೆ ಲಭಿಸುತ್ತದೆಯೋ ಅಥವಾ ರಾಜಕಾರಣದ ಕಾರ್ಯಕ್ರಮಗಳ ಪಾಲಾಗುತ್ತದೆಯೋ’ ಎಂದು ಆತಂಕ ವ್ಯಕ್ತಪಡಿಸಿದ್ದರು.

ADVERTISEMENT

ಏಕೆಂದರೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಹೀಗೆ ಪ್ರಮುಖ ರಾಷ್ಟ್ರೀಯ ಹಬ್ಬಗಳ ಜಿಲ್ಲಾ ಮಟ್ಟದ ಆಚರಣೆಗಳು ನಡೆಸಲು ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣವೇ ಬೇಕು. ಆಗ ಎಲ್ಲೆಂದರಲ್ಲಿ ಶಾಮಿಯಾನಾ, ಕುರ್ಚಿಗಳನ್ನು ಹಾಕುತ್ತಾರೆ. ಸಾಕಷ್ಟು ಜನ ಟ್ರ್ಯಾಕ್‌ ಮೇಲೆ ಮನಬಂದಂತೆ ಓಡಾಡುತ್ತಾರೆ. ಇದರಿಂದ ಟ್ರ್ಯಾಕ್‌ನ ಗುಣಮಟ್ಟ ಹಾಳಾಗುತ್ತದೆ.

ಜಿಲ್ಲೆಯಲ್ಲಿ ಪ್ರಮುಖ ಮೂರು ವಿಶ್ವವಿದ್ಯಾಲಯಗಳು ಇವೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿ.ವಿ. ಮತ್ತು ಕರ್ನಾಟಕ ರಾಜ್ಯ ಕಾನೂನು ವಿ.ವಿ.ಯ ಅಥ್ಲೀಟ್‌ಗಳಿಗೆ ಅಭ್ಯಾಸ ಮಾಡಲು ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣವೇ ಆಸರೆ. ಅವಳಿ ನಗರದಲ್ಲಿ ನೂರಾರು ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿವೆ. ಕೇಂದ್ರ ಸರ್ಕಾರದ ಭಾರತ ಕ್ರೀಡಾ ಪ್ರಾಧಿಕಾರವಿದೆ. ಇವುಗಳಿಗೆಲ್ಲ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಆಯೋಜಿಸಲು ಇರುವುದು ಒಂದೇ ಕ್ರೀಡಾಂಗಣ. ಇದನ್ನು ಪದೇ ಪದೇ ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡರೆ ಕ್ರೀಡಾಪಟುಗಳು ಏನು ಮಾಡಬೇಕು?

ಇದೇ ಕಾಳಜಿಯಿಂದ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳು, ಕ್ರೀಡಾಭಿಮಾನಿಗಳು ಮತ್ತೆ ‘ಕ್ರೀಡಾಂಗಣ ಉಳಿಸಿ’ ಆಂದೋಲನ ಕೈಗೆತ್ತಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಟ್ರ್ಯಾಕ್‌ ಮೇಲೆಯೇ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಮುಂದೆಯೂ ಮಾಡುವುದಾಗಿ ಹೇಳಿದ್ದಾರೆ.

‘ಜಿಲ್ಲೆಗೆ ಇರುವ ಏಕೈಕ ಸಿಂಥೆಟಿಕ್‌ ಟ್ರ್ಯಾಕ್‌ ಉಳಿಸಿಕೊಳ್ಳಬೇಕು ಎನ್ನುವ ಕಾಳಜಿಯಿಂದ ಹಿಂದೆ ಅನೇಕ ಹೋರಾಟ ಮಾಡಿದ್ದೇವೆ. ಆದರೆ, ಈ ಭಾಗಕ್ಕೆ ಬರುವ ಅಧಿಕಾರಿಗಳಿಗೆ ಕ್ರೀಡೆಗೂ ಒತ್ತು ನೀಡಬೇಕು ಎನ್ನುವ ಕಾಳಜಿಯೇ ಇಲ್ಲದಂತಾಗಿದೆ. ಹೀಗಾದರೆ ನಾವು ಯಾರನ್ನು ಕೇಳಬೇಕು. ಅಧಿಕಾರಿಗಳು ನಮ್ಮ ಮಾತು ಕೇಳುವುದು ಬೇಡ ಆದರೆ, ಕ್ರೀಡಾ ಚಟುವಟಿಕೆಗೆ ಮೀಸಲಿಟ್ಟ ಕ್ರೀಡಾಂಗಣದಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ನೀಡಬಾರದು ಎಂದು ಹೈಕೋರ್ಟ್‌ ಸೂಚನೆ ನೀಡಿದೆ. ಇದನ್ನಾದರೂ ಪಾಲಿಸಬೇಕಲ್ಲವೇ’ ಎಂದು ಅಗಡಿಯವರು ನೋವಿನಿಂದ ಪ್ರಶ್ನಿಸುತ್ತಾರೆ. ಇದಕ್ಕಾಗಿ ಇನ್ನು ಎಷ್ಟು ಹೋರಾಟ ಮಾಡಬೇಕು ಎಂದೂ ಕೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.