ADVERTISEMENT

ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿ: ಐದನೇ ಗೆಲುವಿನತ್ತ ದಕ್ಷಿಣ ಆಫ್ರಿಕಾ ಚಿತ್ತ

ಪಿಟಿಐ
Published 20 ಅಕ್ಟೋಬರ್ 2025, 22:44 IST
Last Updated 20 ಅಕ್ಟೋಬರ್ 2025, 22:44 IST
<div class="paragraphs"><p>ವೋಲ್ವಾರ್ಟ್‌</p></div>

ವೋಲ್ವಾರ್ಟ್‌

   

ಕೊಲಂಬೊ: ಸೆಮಿಫೈನಲ್‌ಗೆ ಈಗಾಗಲೇ ಸ್ಥಾನ ಕಾಯ್ದಿರಿಸಿರುವ ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸತತ ಐದನೇ ಗೆಲುವಿನ ಗುರಿಯಲ್ಲಿರುವ ಹರಿಣಗಳ ಪಡೆಯು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವತ್ತ ಕಣ್ಣಿಟ್ಟಿದೆ.

ಕೊಲಂಬೊದಲ್ಲಿ ನಿಗದಿಯಾಗಿದ್ದ ಬಹುತೇಕ ಪಂದ್ಯಗಳು ಮಳೆಗೆ ಕೊಚ್ಚಿಹೋಗಿವೆ. ಹೀಗಾಗಿ, ಎಲ್ಲರ ಕಣ್ಣುಗಳು ಮುಗಿಲಿನತ್ತ ನೆಟ್ಟಿವೆ. ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಲಾರಾ ವೋಲ್ವಾರ್ಟ್‌ ನಾಯಕತ್ವದ ತಂಡವು (8 ಅಂಕ), ಪಾಕಿಸ್ತಾನ (2 ಅಂಕ) ವಿರುದ್ಧ ಗೆಲುವು ಸಾಧಿಸಿ ಪೂರ್ಣ ಎರಡು ಅಂಕ ಗಳಿಸುವ ಹುಮ್ಮಸ್ಸಿನಲ್ಲಿದೆ. ಟೂರ್ನಿಯಲ್ಲಿ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನಕ್ಕೆ ಇದು ‘ಆಟಕ್ಕುಂಟು ಲೆಕ್ಕಕ್ಕಿಲ್ಲದ’ ಪಂದ್ಯವಾಗಿದೆ. 

ADVERTISEMENT

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ತಲಾ 9 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಈ ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿವೆ. ಮೇಲ್ನೋಟಕ್ಕೆ ಆಸ್ಟ್ರೇಲಿಯಾವೇ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯುವ ನೆಚ್ಚಿನ ತಂಡವೆನಿಸಿದೆ. ಟೇಬಲ್‌ ಟಾಪರ್‌ ತಂಡವು ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡದೊಂದಿಗೆ ಸೆಣಸಲಿದೆ. ಹೀಗಾಗಿ, ದಕ್ಷಿಣ ಆಫ್ರಿಕಾ ಗುಂಪಿನಲ್ಲಿ ಮೊದಲೆರಡಲ್ಲಿ ಸ್ಥಾನ ಪಡೆದರೆ ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾ ಎದುರಾಗುವುದನ್ನು ತಪ್ಪಿಸಬಹುದಾಗಿದೆ.

ಶ್ರೀಲಂಕಾ ರಾಜಧಾನಿಯಲ್ಲಿ ನಡೆದ ಒಂಬತ್ತು ಪಂದ್ಯಗಳಲ್ಲಿ ಐದು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಅದರಲ್ಲಿ ಪಾಕ್‌ನ ಎರಡು ಪಂದ್ಯಗಳು ಸೇರಿವೆ. ಫಾತಿಮಾ ಸನಾ ನಾಯಕತ್ವದ ತಂಡವು ಟೂರ್ನಿಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಅದ್ದರಿಂದ ಮೊದಲ ಗೆಲುವನ್ನು ಎದುರು ನೋಡುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.