ADVERTISEMENT

ಪ್ರತಿಭೆ ಸಂಪತ್ತಿನ ಸೆರೆಯಾಳಲ್ಲ; ಕೆಳಮಧ್ಯಮ ವರ್ಗದ ಮಕ್ಕಳಿಗೂ ಕ್ರೀಡೆ ಸಾಧ್ಯ: ರಮಣ

ಪಿಟಿಐ
Published 28 ಫೆಬ್ರುವರಿ 2025, 14:42 IST
Last Updated 28 ಫೆಬ್ರುವರಿ 2025, 14:42 IST
ಪಿ.ವಿ. ಸಿಂಧು ಮತ್ತು ತಂದೆ ಪಿ.ವಿ. ರಮಣ 
ಪಿ.ವಿ. ಸಿಂಧು ಮತ್ತು ತಂದೆ ಪಿ.ವಿ. ರಮಣ    

ನವದೆಹಲಿ: ಪ್ರತಿಭೆಯು ಸಂಪತ್ತಿನ ಸೆರೆಯಾಳು ಅಲ್ಲ. ಕೆಳಮಧ್ಯಮ ಅಥವಾ ಮಧ್ಯಮ ವರ್ಗದ ಕುಟುಂಬಗಳ ಕ್ರೀಡಾಪಟುಗಳೂ  ಉನ್ನತ ಸಾಧನೆ ಮಾಡುವ ಅವಕಾಶಗಳು ಇವೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎನ್ನುವುದನ್ನು  ಮರೆಯಬಾರದು ಎಂದು ಅಂತರರಾಷ್ಟ್ರೀಯ ಮಾಜಿ ವಾಲಿಬಾಲ್ ಆಟಗಾರ ಮತ್ತು ಒಲಿಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಅವರ ತಂದೆ ಪಿ.ವಿ. ರಮಣ ಅಭಿಪ್ರಾಯಪಟ್ಟರು. 

‘ನಾನು 3 ವರ್ಷದವನಿದ್ದಾಗ ಅಪ್ಪ ನಿಧನರಾದರು. 10 ಮಂದಿ ಮಕ್ಕಳಲ್ಲಿ ನಾನೇ ಚಿಕ್ಕವನಾಗಿದ್ದೆ. ಅಣ್ಣಂದಿರು ಮತ್ತು ಅಕ್ಕಂದಿರು ಬಹಳ ಪ್ರೀತಿಯಿಂದ ನನ್ನ ವಾಲಿಬಾಲ್ ಪ್ರೀತಿಗೆ ಪ್ರೋತ್ಸಾಹ ನೀಡಿದರು. ರಾಷ್ಟ್ರಮಟದಲ್ಲಿ ಆಡುವ ಮಟ್ಟಕ್ಕೆ ನನ್ನನ್ನು ಬೆಳೆಸಿದರು. ಅದರಿಂದಾಗಿ ನನಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಲಭಿಸಿತು. ಇದೆಲ್ಲವೂ ಆಗಿದ್ದು ವಾಲಿಬಾಲ್‌ನಿಂದ’ ಎಂದು ರಮಣ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. 

ಕೆಳಮಧ್ಯಮ ಕುಟುಂಬದಲ್ಲಿ ಜನಿಸಿದ್ದ ರಮಣ ಅವರು 1986ರಲ್ಲಿ ಏಷ್ಯಾ ವಾಲಿಬಾಲ್‌ನಲ್ಲಿ ಪದಕ ಗೆದ್ದ ಭಾರತ ತಂಡವನ್ನು ಪ್ರತಿನಿಧಿಸಿದರು. ಅಷ್ಟೇ ಅಲ್ಲ. ಮಗಳು ಸಿಂಧು ಅವರನ್ನು ಬ್ಯಾಡ್ಮಿಂಟನ್ ಆಟಗಾರ್ತಿಯನ್ನಾಗಿ ಬೆಳೆಸಿದರು. ಸಿಂಧು ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದರು. ವಿಶ್ವ ಚಾಂಪಿಯನ್ ಕೂಡ ಆಗಿದ್ದರು.

ADVERTISEMENT

‘ಭಾರತದಲ್ಲಿ ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಮಾತ್ರ ಕ್ರೀಡಾಪಟುಗಳಾಗಲು ಸಾಧ್ಯ. ಮಧ್ಯಮವರ್ಗದವರು ಮಕ್ಕಳನ್ನು ಕ್ರೀಡೆಗೆ ಕಳಿಸುವ ಮುನ್ನ ಯೋಚಿಸಬೇಕು’ ಎಂದು ಈಚೆಗೆ ಹಿರಿಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ಕ್ರೀಡಾವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. 

61 ವರ್ಷದ ರಮಣ ಅವರು ಗೋಪಿ ಮಾತುಗಳನ್ನು ಅಲ್ಲಗಳೆಯುವಂತಹ ಹೇಳಿಕೆ ನೀಡಿದರು. 

‘ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಸಮತೋಲನ ಕಾಯ್ದುಕೊಳ್ಳಬೇಕು. ನನ್ನ ದೊಡ್ಡ ಮಗಳು ವಿದ್ಯಾಭ್ಯಾಸದಲ್ಲಿ ಉತ್ತಮವಾಗಿದ್ದಳು. ಆದ್ದರಿಂದ ಓದಿನಲ್ಲಿಯೇ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದೆ. ಸಿಂಧು ಬ್ಯಾಡ್ಮಿಂಟನ್ ಕೋರ್ಟ್‌ ನಲ್ಲಿ ತೋರುತ್ತಿದ್ದ ಚುರುಕುತನ ಗಮನ ಸೆಳೆಯಿತು. ಬೇರೆಲ್ಲ ಮಕ್ಕಳಿಗಿಂತ ಚೆನ್ನಾಗಿ ಆಡುವುದನ್ನು ನೋಡಿದೆ. ಪ್ರೋತ್ಸಾಹ ನೀಡಿದೆವು’ ಎಂದು ಹೇಳಿದರು. 

ಶ್ರೀಮಂತ ಕುಟುಂಬದ ಹಿನ್ನೆಲೆ ಇರುವ ಅಥ್ಲಿಟ್‌ಗಳಿಗೆ ಮಾತ್ರ ಉತ್ತಮ ಕ್ರೀಡಾಪಟುಗಳಗುವ ಅವಕಾಶವಿದೆ ಎಂಬುದು ‘ನ್ಯಾಯಸಮ್ಮತವಲ್ಲ’ ಎಂದು ಅಭಿಪ್ರಾಯಪಟ್ಟರು.

‘ಟೂರ್ನಿಗಳಲ್ಲಿ ಆಡಲು ಸಿಂಧು ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಆಕೆಯೊಂದಿಗೆ ಇದ್ದ ಕೆಲವು ಮಕ್ಕಳು ವಿಮಾನ ಪ್ರಯಾಣ ಮಾಡುತ್ತಿದ್ದರು. ನಾವೇಕೆ ಯಾವಾಗಲೂ ರೈಲಿನಲ್ಲಿ ಪ್ರಯಾಣಿಸುತ್ತೇವೆ. ವಿಮಾನದಲ್ಲಿ ಯಾಕಿಲ್ಲ ಎಂದು ಸಿಂಧು ಪ್ರಶ್ನಿಸುತ್ತಿದ್ದ ದಿನಗಳಿದ್ದವು. ಈಗ ಸಿಂಧುವನ್ನು ನೋಡಿ ಹೇಗಿದ್ದಾರೆ. ಬೆಳೆಯಲು ಕಠಿಣ ಶ್ರಮ ಪಡಲು ಸದಾ ಸಿದ್ಧವಾಗಿರಬೇಕಷ್ಟೇ’ ಎಂದು ರಮಣ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.