ನೀರಜ್ ಚೋಪ್ರಾ ಸಂಭ್ರಮ
ನವದೆಹಲಿ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಸೇರಿದಂತೆ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳುವ ಭಾರತದ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೀಟುಗಳಿಗೆ ಯುರೋಪ್ ಮತ್ತು ಅಮೆರಿಕದಲ್ಲಿ ತರಬೇತಿ ಪಡೆಯಲಿದ್ದಾರೆ. ಅನುಭವ ಪಡೆದು ಪದಕ ಗೆಲ್ಲುವ ಸಂಭವ ಹೆಚ್ಚಿಸುವ ಇಂಥ ದೀರ್ಘಾವಧಿ ಪ್ರವಾಸಕ್ಕೆ ಕ್ರೀಡಾ ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಸಮ್ಮತಿ ನೀಡಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಟೋಕಿಯೊದಲ್ಲಿ ಸೆ. 13 ರಿಂದ 21ರವರೆಗೆ ನಡೆಯಲಿದೆ.
ಎಂಒಸಿಯ 157ನೇ ಸಭೆಯ ಶನಿವಾರ ಇಲ್ಲಿ ನಡೆಯಿತು. ಅಥ್ಲೆಟಿಕ್ಸ್ ಕ್ರೀಡೆ ಅತಿ ದೊಡ್ಡ ಫಲಾನುಭವಿಯಾಗಿದ್ದು, ತರಬೇತಿ ಮತ್ತು ಸ್ಪರ್ಧಿಗಳ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಯಿತು. ಇದಕ್ಕೆ ಒಟ್ಟು ₹86 ಲಕ್ಷ ವೆಚ್ಚವಾಗಲಿದೆ. ಈಗಾಗಲೇ ಈ ಕೂಟಕ್ಕೆ ಅರ್ಹತೆ ಪಡೆದದವರಿಗೆ ಸಿಂಹಪಾಲು ವೆಚ್ಚ ಸಿಗಲಿದೆ.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಸ್ಪರ್ಧಿ ಮತ್ತು ಪದಕದ ಪ್ರಬಲ ಭರವಸೆಯಾಗಿರುವ ಚೋಪ್ರಾ ಅವರು ಝೆಕ್ ಗಣರಾಜ್ಯದ ಪ್ರಾಗ್ ಮತ್ತು ನಿಂಬುರ್ಕ್‌ನಲ್ಲಿ 57 ದಿನ ತರಬೇತಿ ಪಡೆಯಲಿದ್ದಾರೆ. ಅವರು ತಮ್ಮ ಫಿಸಿಯೊ ಇಶಾನ್ ಮಾರ್ವಾ ಜೊತೆ ಶನಿವಾರ ನಿರ್ಗಮಿಸಿದ್ದು, ಸೆ. 5ರವರೆಗೆ ಝೆಕ್ ಗಣರಾಜ್ಯದಲ್ಲಿ ಇರುತ್ತಾರೆ.
2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೊದಲು, 27 ವರ್ಷ ವಯಸ್ಸಿನ ಹರಿಯಾಣದ ಅಥ್ಲೀಟ್ 2022ರಲ್ಲಿ ಬೆಳ್ಳಿ ಗೆದ್ದಿದ್ದರು. ಅಂಜು ಬಾಬಿ ಜಾರ್ಜ್ (2023ರಲ್ಲಿ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ) ನಂತರ ಈ ಕೂಟದಲ್ಲಿ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್ ಎನಿಸಿದ್ದಾರೆ ಚೋಪ್ರಾ.
ಸ್ಟೀಪಲ್‌ಚೇಸರ್‌ಗಳಾದ ಅವಿನಾಶ್ ಸಾಬ್ಳೆ, ಪಾರುಲ್ ಚೌಧರಿ, ದೂರ ಅಂತರದ ಓಟಗಾರರಾದ ಗುಲ್ವೀರ್ ಸಿಂಗ್ ಅವರು ಲಾಸ್ ಏಂಜಲಿಸ್‌ನ ಕೊಲರಾಡೊ ಸ್ಪ್ರಿಂಗ್ಸ್‌ನಲ್ಲಿ ಜುಲೈ 16 ರಿಂದ ಸೆಪ್ಟೆಂಬರ್ 3ರವರೆಗೆ ತರಬೇತಿ ಪಡೆಯಲಿದ್ದಾರೆ. ಈ ಮೂವರ ತರಬೇತಿ, ಪ್ರವಾಸಕ್ಕೆ ಸರ್ಕಾರ ₹41.29 ಲಕ್ಷ ವೆಚ್ಚ ಮಾಡಲಿದೆ. ಈ ಮೂವರೂ ರಾಷ್ಟ್ರೀಯ ದಾಖಲೆ ಹೊಂದಿದ್ದು, ದಕ್ಷಿಣ ಕೊರಿಯಾದ ಗುಮಿಯಲ್ಲಿ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಗುಲ್ವೀರ್ ಅವರು 5000 ಮತ್ತು 10000 ಮೀ. ಓಟಗಳಲ್ಲಿ ಚಿನ್ನ ಜಯಿಸಿದ್ದರು.
ಇತರ ಪ್ರಸ್ತಾವಳಿಗೆ ಅಂಕಿತ:
ಲಾಂಗ್ ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ್ ಅವರು ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ (ಪೋರ್ಚುಗಲ್, ಸ್ಪೇನ್, ಕಜಕಸ್ತಾನ) ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು ಇದಕ್ಕಾಗಿ ₹5.58 ಲಕ್ಷ ಮಂಜೂರಾಗಿದೆ. ಈ ಸ್ಪರ್ಧೆಗಳು ಜುಲೈ 19 ರಿಂದ ಆಗಸ್ಟ್ 14ರ ಮಧ್ಯೆ ನಡೆಯಲಿವೆ.
2024ರಲ್ಲಿ ಅವರು ಮೊಣಕಾಲಿನ ನೋವಿನಿಂದಾಗಿ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೂ ವಿಶ್ರಾಂತಿ ಪಡೆದಿದ್ದರು.
ಲಾಂಗ್‌ಜಂಪ್‌ನಲ್ಲಿ ಪದಕ ಭರವಸೆಗಳಾದ ಆನ್ಸಿ ಸೋಜನ್, ಶೈಲಿ ಸಿಂಗ್ ಅವರು ಯುರೋಪ್‌ನಲ್ಲಿ (ಲಂಡನ್, ಬರ್ಲಿನ್, ಲುಸಾನ್) ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ₹9.21 ಲಕ್ಷ ವೆಚ್ಚವಾಗಲಿದೆ.
ಕಾರ್ಡಿಫ್‌ಗೆ ಪ್ಯಾರಾಶಟ್ಲರ್‌ಗಳು:
ಭಾರತದ ಪ್ಯಾರಾಶಟ್ಲರ್‌ಗಳು ಜುಲೈ 22 ರಿಂದ 26ರವರೆಗೆ ಬ್ರಿಟಿಷ್ ಮತ್ತು ಐರಿಷ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ವರ್ಷ ವಿಶ್ವ ಪ್ಯಾರಾ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಇಲ್ಲಿ ಗಳಿಸುವ ಪಾಯಿಂಟ್‌ಗಳು ಮಹತ್ವದ್ದಾಗಲಿವೆ. ಇದಕ್ಕೆ ಮಿಷನಲ್ ಒಲಿಂಪಿಕ್ ಸೆಲ್ ₹44.26 ಲಕ್ಷ ಮೀಸಲಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.