ಬೆಂಗಳೂರು: ಹಿಂದಿನ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಭಾರತದ ರೂಪಿಂದರ್ ಸಿಂಗ್ ಹಾಗೂ ಮನದೀಪ್ ಸಿಂಗ್ ಮತ್ತೆ ಮೋಡಿ ಮಾಡಿದರು.
ಈ ಇಬ್ಬರೂ ಗಳಿಸಿದ ತಲಾ ಒಂದು ಗೋಲುಗಳ ನೆರವಿನಿಂದಭಾನುವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕೇಂದ್ರದಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೂರನೇ ಪಂದ್ಯದಲ್ಲೂ ಭಾರತ ಸುಲಭವಾಗಿ ಗೆದ್ದಿತು. ಈ ಮೂಲಕ ಸರಣಿಯಲ್ಲಿನ ಎಲ್ಲ ಪಂದ್ಯಗಳನ್ನು ಜಯಿಸಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಪಿ. ಆರ್. ಶ್ರೀಜೇಶ್ ಬಳಗ ಮೂರನೇ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 4–0 ಗೋಲುಗಳಿಂದ ಮಣಿಸಿತು.
ಆತಿಥೇಯ ತಂಡವು ಮೊದಲ ಕ್ವಾರ್ಟರ್‌ನ ಆರಂಭದಿಂದಲೂ ಆಕ್ರಮಣಕಾರಿ ಆಟ ಆಡಿತು. ಈ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದ ಕಿವೀಸ್ ಪಡೆಯ ಸವಾಲು ಮೀರಿತು.
ಮೊದಲ ನಿಮಿಷದಲ್ಲೇ ತನಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಭಾರತ ಎಡವಿತು.8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಡ್ರ್ಯಾಗ್ ಫ್ಲಿಕ್ ಪರಿಣತ ರೂಪಿಂದರ್ ಗೋಲಾಗಿ ಪರಿವರ್ತಿಸಿದರು. ಅವರು ಬಾರಿಸಿದ ಚೆಂಡು ನ್ಯೂಜಿಲೆಂಡ್ ಗೋಲ್‌ಕೀಪರ್ ರಿಚರ್ಡ್ ಜಾಯ್ಸ್ ಅವರ ಕಣ್ತಪ್ಪಿಸಿ ಗೋಲುಪೆಟ್ಟಿಗೆ ಸೇರಿತು. ಈ ಮೂಲಕ ರೂಪಿಂದರ್, ಸರಣಿಯಲ್ಲಿ ನಾಲ್ಕು ಗೋಲುಗಳನ್ನು ದಾಖಲಿಸಿದರು. ಭಾರತ 1–0ಯ ಮುನ್ನಡೆ ಸಾಧಿಸಿತು.
ಆತಿಥೇಯ ತಂಡ ಮತ್ತೆ ತನ್ನ ಪ್ರಾಬಲ್ಯ ಮುಂದುವರಿಸಿತು. 15ನೇ ನಿಮಿಷದಲ್ಲಿ ರೂಪಿಂದರ್ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸುರೇಂದರ್ ಕುಮಾರ್ ಅದನ್ನು ಗುರಿ ಸೇರಿಸಿ ತಂಡದ ಆಟಗಾರರಲ್ಲಿ ಸಂತಸ ಮೂಡಿಸಿದರು.
ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟ ರಂಗೇರಿತು. 44ನೇ ನಿಮಿಷದಲ್ಲಿ ಸರ್ದಾರ್ ಸಿಂಗ್ ಹಾಗೂ ಸಿಮ್ರನ್‌ಜೀತ್ ಸಿಂಗ್ ಅವರು ಶಾರ್ಟ್ ಪಾಸ್‌ಗಳ ಮೂಲಕ ಚೆಂಡನ್ನು ಮನದೀಪ್ ಅವರತ್ತ ತಳ್ಳಿದರು. ಅವರು ಇದನ್ನು ಸೊಗಸಾಗಿ ಗುರಿ ಮುಟ್ಟಿಸಿದರು. ಮುಂದಿನ ನಿಮಿಷದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಶ್ರೀಜೇಶ್ ಪಡೆಯ ರಕ್ಷಣಾ ವಿಭಾಗದ ಆಟಗಾರರು ವಿಫಲಗೊಳಿಸಿದರು.
ಆತಿಥೇಯ ತಂಡವು 3–0ಯ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.
60ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್, ತಂಡಕ್ಕೆ ನಾಲ್ಕನೇ ಗೋಲಿನ ಕಾಣಿಕೆ ನೀಡಿ ತಮ್ಮ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.
*
ವಿಶ್ವದ ಉತ್ತಮ ತಂಡದ ಎದುರು ನಾವು ತೋರಿದ ಸಾಧನೆ ತೃಪ್ತಿ ತಂದಿದೆ. ಮುಂದಿನ ತಿಂಗಳು ನಡೆಯುವ ಎಷ್ಯನ್ ಕ್ರೀಡಾಕೂಟಕ್ಕೆ ವಿಶ್ವಾಸದಿಂದ ತೆರಳಲಿದ್ದೇವೆ.
-ಹರೇಂದರ್ ಸಿಂಗ್, ಭಾರತ ಹಾಕಿ ತಂಡದ ಕೋಚ್
*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.