
ತ್ರಿವರ್ಣ ಧ್ವಜ
ನವದೆಹಲಿ: ಭಾರತವು 2028ರ ಎರಡು ಜಾಗತಿಕ ಅಥ್ಲೆಟಿಕ್ ಕೂಟಗಳ ಆತಿಥ್ಯಕ್ಕೆ ಉತ್ಸಾಹ ತೋರಿಸಿದ್ದು ಬಿಡ್ ಸಹ ಸಲ್ಲಿಸಿದೆ. ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ಅನ್ನು ಭುವನೇಶ್ವರದಲ್ಲಿ ಮತ್ತು ವಿಶ್ವ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಅನ್ನು ಅಹಮದಾಬಾದಿನಲ್ಲಿ ಹಮ್ಮಿಕೊಳ್ಳಲು ಭಾರತ ಅಥ್ಲೆಟಿಕ್ ಫೆಡರೇಷನ್ ಬಿಡ್ ಸಲ್ಲಿಸಿದೆ.
ಈ ಎರಡರ ಪೈಕಿ, 2028ರ ವಿಶ್ವ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಹಮ್ಮಿಕೊಳ್ಳಲು ಎಎಫ್‌ಐ ಈ ಹಿಂದೆಯೇ, 2024ರ ಕೊನೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರ ಭೇಟಿ ಸಂದರ್ಭದಲ್ಲಿ ಬಿಡ್ ಸಲ್ಲಿಸಿತ್ತು. ಹೊಸ ಬೆಳವಣಿಗೆಯಲ್ಲಿ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನ ಅತಿಥ್ಯಕ್ಕೂ ಆಸಕ್ತಿ ವಹಿಸಿದೆ.
ವಿಶ್ವ ಅಥ್ಲೆಟಿಕ್ಸ್‌ನ ಇಬ್ಬರು ಸದಸ್ಯರ ತಂಡ ಬುಧವಾರ ಭುನವೇಶ್ವರದ ಕಳಿಂಗ ಕ್ರೀಡಾಂಗಣ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಎಎಫ್‌ಐ ಉಪಾಧ್ಯಕ್ಷ ಅದಿಲ್ ಸುಮರಿವಾಲಾ ಮತ್ತು ಒಡಿಶಾ ಸರ್ಕಾರದ ಅಧಿಕಾರಿಗಳು ಹಾಜರಿದ್ದರು.
ಮಾರ್ಚ್‌ನಲ್ಲಿ 2028ರ ಮತ್ತು 2030ರ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ ತಾಣಗಳನ್ನು ಪ್ರಕಟಿಸಲಾಗುತ್ತದೆ. ಅದೇ ತಿಂಗಳಲ್ಲಿ ವಿಶ್ವ ಒಳಾಂಗಣ ಕ್ರೀಡಾಂಗಣದ ಆತಿಥ್ಯ ವಹಿಸುವ ದೇಶದ ಹೆಸರನ್ನೂ ಘೋಷಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.