ಭಾರತದ ಪರ ಗೋಲು ಹೊಡೆದ ಉದಿತಾ (ಮಧ್ಯ) ಅವರು ಸುಮನ್ ದೇವಿ ಅವರೊಂದಿಗೆ ಸಂಭ್ರಮಿಸಿದರು
ಚಿತ್ರ: ಹಾಕಿ ಇಂಡಿಯಾ
ಹಾಂಗ್‌ಝೌ (ಚೀನಾ): ನವನೀತ್ ಕೌರ್ ಹಾಗೂ ಮುಮ್ತಾಜ್ ಖಾನ್ ಅವರು ಗಳಿಸಿದ ತಲಾ ಮೂರು ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡವು ಏಷ್ಯಾ ಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸೋಮವಾರ ಸಿಂಗಪುರ ಎದುರು 12–0 ಭರ್ಜರಿ ಗೆಲುವು ಸಾಧಿಸಿತು. ಜೊತೆಗೆ ಬಿ ಗುಂಪಿನಲ್ಲಿ ಅಗ್ರಸ್ಥಾನದೊಡನೆ ಸೂಪರ್ ಫೋರ್ ಹಂತಕ್ಕೆ ಲಗ್ಗೆ ಇಟ್ಟಿತು.
ನವನೀತ್ ಅವರು 14ನೇ ನಿಮಿಷ, 20ನೇ ನಿ., ಹಾಗೂ 28ನೇ ನಿಮಿಷದಲ್ಲಿ ಗೋಲು ಹೊಡೆದರೆ, ಮುಮ್ತಾಜ್ ಅವರು ಎರಡನೇ, 32ನೇ ಹಾಗೂ 39ನೇ ನಿಮಿಷದಲ್ಲಿ ಗೋಲು ಹೊಡೆದು ಹ್ಯಾಟ್ರಿಕ್ ಪೂರೈಸಿದರು.
ನೇಹಾ (11ನೇ ಹಾಗೂ 38ನೇ ನಿ.) ಎರಡು ಗೋಲು ಹೊಡೆದರೆ, ಲಾಲ್ರೆಮ್‌ಸಿಯಾಮಿ (13ನೇ ನಿ.), ಉದಿತಾ (29ನೇ ನಿ.), ಶರ್ಮಿಳಾ (45ನೇ ನಿ.) ಹಾಗೂ ರುತುಜಾ ದಾದಾಸೊ ಪಿಸಾಳ್ (53ನೇ ನಿ.) ತಲಾ ಒಂದು ಗಳಿಸಿದರು.
ಭಾರತ ತಂಡದ ಆಟಗಾರ್ತಿಯರು ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. ಡಿಫೆನ್ಸ್, ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್ ಆಟಗಾರ್ತಿಯರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಎದುರಾಳಿಯ ಗೋಲಿನತ್ತ ಭಾರತದ ಆಟಗಾರ್ತಿಯರು ಪದೇಪದೇ ಲಗ್ಗೆಯಿಟ್ಟು ನಿರಂತರ ಒತ್ತಡ ಹೇರಿದರು.
ಭಾರತ ತಂಡವು ಗುಂಪು ಹಂತದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 11–0ಯಿಂದ ಜಯಿಸಿದ್ದರೆ, ಎರಡನೇ ಪಂದ್ಯದಲ್ಲಿ ಜಪಾನ್ ಜತೆಗೆ 2–2ರ ಸಮಬಲ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.