ADVERTISEMENT

ಜೂನಿಯರ್‌ ಏಷ್ಯಾ ಕಪ್‌ ಹಾಕಿ: ಭಾರತ–ಜಪಾನ್‌ ಸೆಮಿ ಸೆಣಸು

ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿ

ಪಿಟಿಐ
Published 9 ಜೂನ್ 2023, 15:24 IST
Last Updated 9 ಜೂನ್ 2023, 15:24 IST
ಹಾಕಿ
ಹಾಕಿ   

‌ಕಾಕಮಿಗಹರ, ಜಪಾನ್ (ಪಿಟಿಐ): ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ಮಹಿಳಾ ತಂಡದವರು ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಶನಿವಾರ ಜಪಾನ್‌ ತಂಡವನ್ನು ಎದುರಿಸಲಿದ್ದಾರೆ.

ಭಾರತ ತಂಡ ‘ಎ’ ಗುಂಪಿನಲ್ಲಿ ಅಜೇಯ ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದು ಸೆಮಿಯಲ್ಲಿ ಸ್ಥಾನ ಪಡೆದಿತ್ತು. ಉಜ್ಬೆಕಿಸ್ತಾನ (22–0), ಮಲೇಷ್ಯಾ (2–1) ಮತ್ತು ಚೀನಾ ತೈಪೆ (11–0) ತಂಡಗಳನ್ನು ಮಣಿಸಿದ್ದರೆ, ಕೊರಿಯಾ ಜತೆ ಡ್ರಾ ಮಾಡಿಕೊಂಡಿತ್ತು.

ಭಾರತ ತಂಡವು ಶನಿವಾರ ಗೆದ್ದರೆ ಫೈನಲ್‌ನಲ್ಲಿ ಸ್ಥಾನ ಪಡೆಯುವುದು ಮಾತ್ರವಲ್ಲದೆ, ಎಫ್‌ಐಎಚ್‌ ಜೂನಿಯರ್‌ ಮಹಿಳೆಯರ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ADVERTISEMENT

ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ತಂಡಗಳು ಚಿಲಿಯ ಸ್ಯಾಂಟಿಯಾಗೊದಲ್ಲಿ ನ. 29 ರಿಂದ ಡಿ. 10ರ ವರೆಗೆ ನಡೆಯಲಿರುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದುಕೊಳ್ಳಲಿವೆ.

'ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸೆಮಿಫೈನಲ್‌ನಲ್ಲೂ ಅದನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ‘ ಎಂದು ಭಾರತ ತಂಡದ ನಾಯಕಿ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಪಾನ್‌ ತಂಡ ಕೂಡಾ ಲೀಗ್‌ ಹಂತದಲ್ಲಿ ಉತ್ತಮವಾಗಿ ಆಡಿ ‘ಬಿ’ ಗುಂಪಿನಲ್ಲಿ ಚೀನಾ ಬಳಿಕ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ ತಲುಪಿದೆ. ಹಾಂಗ್‌ಕಾಂಗ್‌ (23–0) ಮತ್ತು ಇಂಡೊನೇಷ್ಯಾ (21–0) ತಂಡಗಳ ವಿರುದ್ಧ ಗೋಲಿನ ಮಳೆಗರೆದಿತ್ತು.

ಪಂದ್ಯ ಆರಂಭ: ಬೆಳಿಗ್ಗೆ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.