
ಪರ್ತ್: ಭಾರತದ ಪುರುಷರ ಹಾಕಿ ತಂಡ ಮೊದಲ ಪಂದ್ಯಕ್ಕಿಂತ ಸ್ವಲ್ಪ ಸುಧಾರಿತ ಪ್ರದರ್ಶನ ನೀಡಿದರೂ, ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಎರಡನೇ ಹಾಕಿ ಟೆಸ್ಟ್ ಪಂದ್ಯದಲ್ಲಿ 2–4 ಗೋಲುಗಳಿಂದ ಸೋಲುಭವಿಸಿತು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 1–5 ಗೋಲುಗಳ ಮುಖಭಂಗ ಅನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ಬಲಾಢ್ಯ ಎದುರಾಳಿಗಳ ವಿರುದ್ಧ ಮೊದಲ ಮತ್ತು ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಸಮಸಮನಾಗಿಯೇ ಆಡಿದರು. ವಿರಾಮದ ವೇಳೆಗೆ ಭಾರತ ತಂಡವೇ 2–1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಆದರೆ ವಿರಾಮದ ನಂತರ ರಕ್ಷಣಾ ವಿಭಾಗದಲ್ಲಿ ಹುಳುಕುಗಳು ಕಂಡುಬಂದು, ಆತಿಥೇಯರು ಮೂರು ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿದರು.
ಜೆರೆಮಿ ಹೇವಾರ್ಡ್ (6 ಮತ್ತು 34ನೇ ನಿಮಿಷ) ಅವರು ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಜಾಕೋಬ್ ಆ್ಯಂಡರ್ಸನ್ (42ನೇ ನಿಮಿಷ) ಮತ್ತು ನೇಥನ್ ಇಪ್ರೇಮ್ಸ್ (45ನೇ) ಅವರು ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತದ ಪರ ಜುಗರಾಜ್ ಸಿಂಗ್ (9ನೇ ನಿಮಿಷ) ಮತ್ತು ನಾಯಕ ಹರ್ಮನ್‌ಪ್ರೀತ್ ಸಿಂಗ್ (30ನೇ ನಿಮಿಷ) ಅವರು ಗೋಲ್ ಸ್ಕೋರ್ ಮಾಡಿದರು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ಗಳ ಮೂಲಕ ಬಂದವು.
ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯ ಏಪ್ರಿಲ್ 10ರಂದು ನಡೆಯಲಿದೆ. ಈ ಸರಣಿಗೆ ‘ಪರ್ತ್ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಆಫ್ ಹಾಕಿ’ ಎಂದು ಹೆಸರಿಸಲಾಗಿದೆ. ಈ ಸರಣಿಯು ಉಭಯ ತಂಡಗಲಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆಯ ಭಾಗವಾಗಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.