ADVERTISEMENT

ಟೇಬಲ್ ಟೆನಿಸ್: ಕ್ವಾರ್ಟರ್‌ಫೈನಲ್‌ಗೆ ದಿಯಾ, ಸ್ವಸ್ತಿಕಾ

ಪಿಟಿಐ
Published 30 ಮೇ 2021, 13:03 IST
Last Updated 30 ಮೇ 2021, 13:03 IST
ದಿಯಾ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್‌ -ಪಿಟಿಐ ಚಿತ್ರ
ದಿಯಾ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್‌ -ಪಿಟಿಐ ಚಿತ್ರ   

ನವದೆಹಲಿ: ಭಾರತದ ಯುವ ಆಟಗಾರ್ತಿಯರಾದ ದಿಯಾ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್‌ ಜೋಡಿ ಟುನೀಷಿಯಾದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಯೂತ್ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್‌ ಟೂರ್ನಿಯ ಬಾಲಕಿಯರ ತಂಡ ವಿಭಾಗದ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

19 ವರ್ಷದೊಳಗಿನವರ ವಿಭಾಗದ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಇಬ್ಬರೂ ನಾಕ್ ಔಟ್ ಹಂತ ತಲುಪುವ ಮೊದಲೇ ಹೊರಬಿದ್ದಿದ್ದರು. ಆದರೆ ಮುಂಬೈ ಜೋಡಿ ಡಬಲ್ಸ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದರು. ಬೆಲಾರಸ್‌ನ ದಾರಿಯಾ ವಾಸಿಲೆಂಕಾ (11–7, 11–7, 11–7), ಲಿಂಡಾ ಜೆಡೆರೊವಾ (11–4, 10–12, 11–1, 11–8) ಮತ್ತು ಅಲ್ಜೀರಿಯಾದ ನರಿಮೆನಿ ಹಿಂದ್ (11–3, 11–4, 11–7) ಅವರನ್ನು ದಿಯಾ ಮಣಿಸಿದರು. ಸ್ವಸ್ತಿಕಾ ಗ್ರೀಸ್‌ನ ಮಲಮಟೆನಿಯಾ (11–6, 11–6, 11–9) ಮತ್ತು ಪೋರ್ಚುಗೀಸ್‌ನ ಐನಿಸ್ ಮಟೊಸ್ (8–11, 11–6, 11–5, 8–11, 11–7) ಎದುರು ಜಯ ಗಳಿಸಿದರು.

ಮುಂದಿನ ಸುತ್ತಿನಲ್ಲಿ ಅವರು ಜೆಕ್ ಗಣರಾಜ್ಯದ ಲಿಂಡಾ ಜಡೆರೊವಾ ಮತ್ತು ಕ್ರೊವೇಷಿಯಾದ ಹನಾ ಹರೊಪೊವಿಚ್‌ ವಿರುದ್ಧ ಸೆಣಸುವರು.

ADVERTISEMENT

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರೆಯೇಶ್ ರಾಜ್ ಸುರೇಶ್ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋತರು. 19 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಪಯಾಸ್ ಜೈನ್ ಮತ್ತು ದೀಪಿತ್ ಪಾಟೀಲ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತರು.

ಕೊರೊನಾ ವೈರಸ್ ಹಾವಳಿ ಆರಂಭಗೊಂಡ ನಂತರ ಭಾರತದ ಜೂನಿಯರ್ ಟೇಬಲ್ ಟೆನಿಸ್ ಪಟುಗಳು ಪಾಲ್ಗೊಳ್ಳುತ್ತಿರುವ ಮೊದಲ ಅಂತರರಾಷ್ಟ್ರೀಯ ಟೂರ್ನಿಯಾಗಿದೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.