ADVERTISEMENT

ಎಫ್‌ಐಎಚ್ ಪ್ರೊ ಹಾಕಿ ಲೀಗ್‌: ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ನಿರಾಸೆ

ಪಿಟಿಐ
Published 22 ಫೆಬ್ರುವರಿ 2026, 20:46 IST
Last Updated 22 ಫೆಬ್ರುವರಿ 2026, 20:46 IST
ಭಾರತ (ಬಲ) ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣಕ್ಕೆ ಯತ್ನಿಸಿದರು –ಎಕ್ಸ್‌ ಚಿತ್ರ
ಭಾರತ (ಬಲ) ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣಕ್ಕೆ ಯತ್ನಿಸಿದರು –ಎಕ್ಸ್‌ ಚಿತ್ರ   

ಹೋಬರ್ಟ್‌: ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಭಾರತ ಪುರುಷರ ತಂಡವು ಭಾನುವಾರದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಹೋರಾಟ ನಡೆಸಿತು. ಆದರೆ, ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಆತಿಥೇಯ ತಂಡ ಜಯ ಗಳಿಸಿತು.

ಪೂರ್ಣಾವಧಿಯ ಪಂದ್ಯದಲ್ಲಿ ಭಾರತದ ಪರ ಅಮಿತ್ ರೋಹಿದಾಸ್ (15ನೇ ನಿಮಿಷ) ಮತ್ತು ಜುಗರಾಜ್ ಸಿಂಗ್ (43ನೇ ನಿ) ಗೋಲು ದಾಖಲಿಸಿದರು. ಆಸ್ಟ್ರೇಲಿಯಾ ತಂಡದ ಜೋಯಲ್ ರಿಂಟಾಲಾ (47ನೇ ಮತ್ತು 56ನೇ) ಅವರು ಎರಡು ಗೋಲು ಗಳಿಸಿದರು. 

ನಿಗದಿತ ಅವಧಿಯ ಪಂದ್ಯವು 2–2 ಗೋಲುಗಳಿಂದ ಸಮಬಲಗೊಂಡಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ ತಂಡವು 5–4ರಿಂದ ಗೆಲುವು ಸಾಧಿಸಿತು. ಅಂತಿಮ ಪ್ರಯತ್ನದಲ್ಲಿ ಭಾರತದ ಆದಿತ್ಯ ಅರ್ಜುನ್ ಲಾಲೇಜ್ ಚೆಂಡನ್ನು ಗುರಿ ಸೇರಿಸುವಲ್ಲಿ ಎಡವಿದರು.

ADVERTISEMENT

ಭಾರತ ತಂಡಕ್ಕೆ ಇದು ಲೀಗ್‌ನಲ್ಲಿ ಸತತ ಆರನೇ ಸೋಲಾಗಿದೆ. ತವರಿನfih ರೂರ್ಕೆಲಾ ಲೆಗ್‌ನಲ್ಲಿ ನಾಲ್ಕು ಪಂದ್ಯಗಳನ್ನು ಸೋತಿದ್ದ ಭಾರತ, ಶನಿವಾರ ಹೋಬಾರ್ಟ್ ಲೆಗ್‌ನ ತನ್ನ ಮೊದಲ ಪಂದ್ಯದಲ್ಲಿ 0–2ರಿಂದ ಸ್ಪೇನ್‌ ತಂಡದ ವಿರುದ್ಧ ಸೋತಿತ್ತು. ಆಸ್ಟ್ರೇಲಿಯಾ ತಂಡಕ್ಕೆ ಆರು ಪಂದ್ಯಗಳಲ್ಲಿ ಐದನೇ ಗೆಲುವು ಇದಾಗಿದೆ.

ಪಂದ್ಯದ ಆರಂಭದಲ್ಲೇ ಆಸ್ಟ್ರೇಲಿಯಾ ಆಟಗಾರರು ಚೆಂಡಿನ ಮೇಲೆ ಬಿಗಿ ಹಿಡಿತ ಸಾಧಿಸಿದರು. ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ ಭಾರತ ತಂಡಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ರೋಹಿದಾಸ್ ಅವರು ಡ್ರ್ಯಾಗ್‌ಫ್ಲಿಕ್‌ ಮೂಲಕ ಗೋಲು ದಾಖಲಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒಗಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೋಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದವು. ಆಸ್ಟ್ರೇಲಿಯಾ ತಂಡಕ್ಕೆ ಸತತ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ ಪ್ರಯೋಜನವಾಗಲಿಲ್ಲ. ವಿರಾಮದ ವೇಳೆಗೆ ಭಾರತ ಒಂದು ಗೋಲಿನ ಮುನ್ನಡೆಯನ್ನು ಕಾಯ್ದುಕೊಂಡಿತು.

ಆಟ ಪುನರಾರಂಭವಾದ ಆಸ್ಟ್ರೇಲಿಯಾ ಚೆಂಡಿನ ಮೇಲಿನ ಹಿಡಿತವನ್ನು ಮುಂದುವರಿಸಿತು. ಆದಾಗ್ಯೂ, ಜುಗರಾಜ್‌ ಅವರು ಮೂರನೇ ಕ್ವಾರ್ಟರ್‌ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇರುವಂತೆ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಆಕರ್ಷಕ ಡ್ರ್ಯಾಗ್ ಫ್ಲಿಕ್ ಮೂಲಕ ಗೋಲು ಹೊಡೆದರು. 

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲೇ ಜೋಯಲ್ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ, ಆತಿಥೇಯರ ಗೋಲು ಅಂತರವನ್ನು (1–2) ಕಡಿಮೆ ಮಾಡಿದರು. ಪಂದ್ಯ ಮುಕ್ತಾಯಕ್ಕೆ ನಾಲ್ಕು ನಿಮಿಷ ಇರುವಂತೆ ಜೋಯಲ್ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆದರು. ಹೀಗಾಗಿ ತಂಡಗಳ ಸ್ಕೋರ್ ಸಮಬಲಗೊಂಡಿತು. ಕೊನೆಯ ಮೂರು ನಿಮಿಷದಲ್ಲಿ ಆತಿಥೇಯರಿಗೆ ಐದು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದರೂ ಪ್ರಯೋಜನವಾಗಲಿಲ್ಲ. 

ಮಂಗಳವಾರ ನಡೆಯಲಿರುವ ಹೋಬಾರ್ಟ್ ಲೆಗ್‌ನ ತನ್ನ ಮೂರನೇ ಪಂದ್ಯದಲ್ಲಿ ಭಾರತ ತಂಡವು ಸ್ಪೇನ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.