
ಭಾರತ ಜೂನಿಯರ್ ಪುರುಷರ ತಂಡ
–ಪಿಟಿಐ ಚಿತ್ರ
ಮದುರೈ: ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಎಫ್‌ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನ ನಾಕೌಟ್ ಹಂತಕ್ಕೂ ಮುನ್ನ ಅಂತಿಮ ಗುಂಪು ಲೀಗ್ ಪಂದ್ಯದಲ್ಲಿ ಮಂಗಳವಾರ ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ.
ಬಿ ಗುಂಪಿನಲ್ಲಿರುವ ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿ, ಅಜೇಯವಾಗಿ ಉಳಿದಿವೆ. ಆತಿಥೇಯ ತಂಡವು ಗೋಲುಗಳ ಲೆಕ್ಕಾಚಾರದಲ್ಲಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್ ಎರಡನೇ ಸ್ಥಾನದಲ್ಲಿದೆ.
ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು 7–0 ಅಂತರದಿಂದ ಚಿಲಿಯನ್ನು ಮಣಿಸಿ, ಅಭಿಯಾನ ಆರಂಭಿಸಿತ್ತು. ತನ್ನ ಎರಡನೇ ಪಂದ್ಯದಲ್ಲಿ 17-0 ಅಂತರದಿಂದ ಒಮಾನ್ ತಂಡವನ್ನು ಸದೆಬಡಿದಿತ್ತು. ಅಜೇಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಛಲದಲ್ಲಿರುವ ಆತಿಥೇಯ ತಂಡವು ಹಿಂದಿನ ಪಂದ್ಯಗಳ ಲೋಪಗಳನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸಿದೆ.
ಮತ್ತೊಂದೆಡೆ ಸ್ವಿಟ್ಜರ್ಲೆಂಡ್ ತಂಡವು 4–0ಯಿಂದ ಒಮಾನ್ ತಂಡದ ವಿರುದ್ಧ; ನಂತರದಲ್ಲಿ 3–2ರಿಂದ ಚಿಲಿ ವಿರುದ್ಧ ಗೆಲುವು ಸಾಧಿಸಿದೆ. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ತಂಡವು ತನ್ನ ಎರಡೂ ಪಂದ್ಯಗಳಲ್ಲಿ ಎದುರಾಳಿಗೆ ಒಂದೂ ಗೋಲನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಸ್ವಿಟ್ಜರ್ಲೆಂಡ್ ವಿರುದ್ಧಗೂ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.
ಆದರೆ, ಕೆಲವೊಂದು ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಮೊದಲೆರಡು ಪಂದ್ಯಗಳಲ್ಲಿ ದುರ್ಬಲ ತಂಡಗಳ ಎದುರು ಭಾರತದ ರಕ್ಷಣಾ ವಿಭಾಗವು ಅಷ್ಟೇನೂ ಪರೀಕ್ಷೆಗೆ ಒಳಗಾಗಲಿಲ್ಲ. ಈಗ ಡಿಫೆಂಡಿಂಗ್ ವಿಭಾಗದ ಮೇಲೆ ಹೆಚ್ಚಿನ ಒತ್ತಡವಿದೆ.
ಮತ್ತೊಂದು ಕಳವಳಕಾರಿ ಅಂಶವೆಂದರೆ ಪೆನಾಲ್ಟಿ ಕಾರ್ನರ್‌ಗಳಿಂದ ಡ್ರಾಗ್‌ಫ್ಲಿಕ್ ಮೂಲಕ ಗೋಲುಗಳನ್ನು ಪರಿವರ್ತಿಸುವುದು. ತಂಡದ ಪ್ರಮುಖ ಡ್ರಾಗ್‌ಫ್ಲಿಕ್ಕರ್ ಆಗಿರುವ ನಾಯಕ ರೋಹಿತ್ ಅವರು ತನ್ನ ಆಟದ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಹಿಂದಿನ ಪಂದ್ಯಗಳಲ್ಲಿ ಗೋಲು ಅವಕಾಶವನ್ನು ಅವರು ಕೈಚೆಲ್ಲಿದ್ದರು.
ಕ್ವಾರ್ಟರ್‌ಗೆ ಅರ್ಜೆಂಟೀನಾ, ಜರ್ಮನಿ: ಅರ್ಜೆಂಟೀನಾ ಮತ್ತು ಜರ್ಮನಿ ತಂಡ ಗಳು ಗುಂಪು ಹಂತದಲ್ಲಿ ಅಜೇಯವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದವು.
ಸೋಮವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 3–1ರಿಂದ ಚೀನಾ ವಿರುದ್ಧ ಗೆಲುವು ಸಾಧಿಸಿ, ಸಿ ಗುಂಪಿನ ಅಗ್ರಸ್ಥಾನ ಪಡೆಯಿತು. ಜರ್ಮನಿ 5–1ರಿಂದ ಐರ್ಲೆಂಡ್ ವಿರುದ್ಧ ಜಯ ಗಳಿಸಿ, ಎ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಿತು. ಕೆಲ ಪಂದ್ಯಗಳಿಗೆ ಮಳೆಯಿಂದಾಗಿ ಅಡಚಣೆ ಉಂಟಾಯಿತು.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಜಿಯೊ ಹಾಟ್‌ಸ್ಟಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.