ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌: ಚಿನ್ನದ ಪದಕಕ್ಕೆ ಗುರಿಯಿಟ್ಟ ಭಾರತದ ಶೂಟರ್‌ಗಳು

10 ಮೀ. ಏರ್ ಪಿಸ್ತೂಲ್‌ ವಿಭಾಗದಲ್ಲಿ ಪಾರಮ್ಯ

ಪಿಟಿಐ
Published 21 ಮಾರ್ಚ್ 2021, 10:56 IST
Last Updated 21 ಮಾರ್ಚ್ 2021, 10:56 IST
ಸೌರಭ್ ಚೌಧರಿ–ಪಿಟಿಐ ಚಿತ್ರ
ಸೌರಭ್ ಚೌಧರಿ–ಪಿಟಿಐ ಚಿತ್ರ   

ನವದೆಹಲಿ: ನಿಖರ ಗುರಿಯಿಟ್ಟ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ ಟೂರ್ನಿಯಲ್ಲಿ ಪಾರಮ್ಯ ಮೆರೆದವು. ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ದಿನವಾದ ಭಾನುವಾರ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡವು.

ಯೂತ್ ಒಲಿಂಪಿಕ್ಸ್ ಹಾಗೂ ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಹಾಗೂ ಶಹಜಾರ್‌ ರಿಜ್ವಿ ಅವರನ್ನೊಳಗೊಂಡ ಭಾರತದ ಪುರುಷರ ತಂಡವು 17–11ರಿಂದ ವಿಯೆಟ್ನಾಂ ತಂಡವನ್ನು ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

ಮಹಿಳಾ ತಂಡದ ತ್ರಿವಳಿಗಳಾದ ಯಶಸ್ವಿನಿ ಸಿಂಗ್ ದೇಸ್ವಾಲ್‌, ಮನು ಭಾಕರ್ ಹಾಗೂ ಶ್ರೀ ನಿವೇದಾ ಅವರು 16–8ರಿಂದ ಪೋಲೆಂಡ್‌ನ ಜುಲಿಟಾ ಬೊರೆಕ್‌, ಜೊವಾನ್ನಾ ಇವೊನಾ ವಾರ್ಜೊನೊಸ್ಕಾ ಹಾಗೂ ಅಗ್ನಿಸ್ಕಾ ಕೊರೆಜ್ವೊ ಅವರ ಸವಾಲು ಮೀರಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ADVERTISEMENT

ಭಾರತ ಪುರುಷರ ತಂಡವು ಮೊದಲ ಅರ್ಹತಾ ಸುತ್ತಿನಲ್ಲಿ ವಿಯೆಟ್ನಾಂನ ದಿನ್‌ ಥಾನ್‌ ಎನ್‌ಗುಯೆನ್‌, ಕ್ಯೂಕ್‌ ಕ್ಯೂಂಗ್‌ ತ್ರಾನ್ ಹಾಗೂ ಜುವಾನ್ ಚುಯೆನ್‌ ಪ್ಹಾನ್ ಎದುರು 1750 ಪಾಯಿಂಟ್ಸ್ ಕಲೆಹಾಕಿತು. ವಿಯೆಟ್ನಾಂ ಶೂಟರ್‌ಗಳು 1708 ಪಾಯಿಂಟ್ಸ್ ಗಳಿಸಿದರು. ಎರಡನೇ ಸುತ್ತಿನಲ್ಲಿ ಭಾರತ ಹಾಗೂ ವಿಯೆಟ್ನಾಂ ಕ್ರಮವಾಗಿ 579 ಹಾಗೂ 565 ಪಾಯಿಂಟ್ಸ್ ಸಂಗ್ರಹಿಸಿದವು.

ಭಾರತದ ಮಹಿಳೆಯರು ಮೊದಲ ಅರ್ಹತಾ ಸುತ್ತಿನಲ್ಲಿ 1731 ಪಾಯಿಂಟ್ಸ್ ಗಳಿಸಿದರೆ, ಪೋಲೆಂಡ್‌ ಶೂಟರ್‌ಗಳು ಕಲೆಹಾಕಿದ್ದು 1701. ಎರಡನೇ ಅರ್ಹತಾ ಸುತ್ತಿನಲ್ಲಿ ಭಾರತ 576 ಹಾಗೂ ಪೋಲೆಂಡ್‌ 567 ಪಾಯಿಂಟ್ಸ್ ಗಳಿಸಲು ಶಕ್ತವಾದವು.

23 ವರ್ಷದ ಯಶಸ್ವಿನಿ ದೇಸ್ವಾಲ್‌ ಅವರು ಮಹಿಳೆಯರ 10 ಮೀ. ಏರ್ ರೈಫಲ್‌ ವಿಭಾಗದಲ್ಲಿ ಶನಿವಾರ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಮನು ಭಾಕರ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

ಕೊರಿಯಾ, ಸಿಂಗಪುರ, ಅಮೆರಿಕ, ಇಂಗ್ಲೆಂಡ್‌, ಇರಾನ್‌, ಫ್ರಾನ್ಸ್, ಹಂಗರಿ, ಇಟಲಿ ಸೇರಿದಂತೆ 53 ದೇಶಗಳ ಒಟ್ಟು 294 ಶೂಟಿಂಗ್ ಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.