ADVERTISEMENT

ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಪಿಟಿಐ
Published 28 ಮೇ 2025, 15:41 IST
Last Updated 28 ಮೇ 2025, 15:41 IST
<div class="paragraphs"><p>ರಿಲೇ ಓಟ</p></div>

ರಿಲೇ ಓಟ

   

ಸಾಂದರ್ಭಿಕ ಚಿತ್ರ

ಗುಮಿ (ದಕ್ಷಿಣ ಕೊರಿಯಾ): ಭಾರತ ತಂಡವು 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 4x400 ಮೀ. ಮಿಶ್ರ ರಿಲೇ ಓಟದ ಚಿನ್ನವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಸ್ವರ್ಣದ ಜೊತೆ ಕೂಟದ ಎರಡನೇ ದಿನವಾದ ಬುಧವಾರ ಭಾರತದ ಅಥ್ಲಿಟುಗಳು ವೈಯಕ್ತಿಕ ವಿಭಾಗದಲ್ಲಿ ನಾಲ್ಕು ಬೆಳ್ಳಿ, ಒಂದು ಕಂಚಿನ ಪದಕವನ್ನು ಗೆದ್ದುಕೊಂಡು ಗಮನ ಸೆಳೆದರು.

ADVERTISEMENT

ರೂಪಲ್ ಚೌಧರಿ, ಸಂತೋಷ್‌ ಕುಮಾರ್‌, ವಿಶಾಲ್ ಟಿ.ಕೆ. ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ 3ನಿ.18.12 ಸೆಕೆಂಡುಗಳಲ್ಲಿ ಗುರಿತಲುಪಿತು. ಇವರಲ್ಲಿ ರೂಪಲ್ ಚೌಧರಿ ಬೆಳಿಗ್ಗೆ ನಡೆದ ಮಹಿಳೆಯರ 400 ಮೀ. ಓಟದಲ್ಲಿ ಬೆಳ್ಳಿ ಪದಕವನ್ನೂ ಗೆದ್ದುಕೊಂಡಿದ್ದರು.

ಭಾರತ ತಂಡ ಬ್ಯಾಂಕಾಕ್‌ನಲ್ಲಿ ನಡೆದ 2023ರ ಆವೃತ್ತಿಯಲ್ಲೂ ಮಿಶ್ರ ರಿಲೇ ಸ್ಪರ್ಧೆಯಲ್ಲಿ ವಿಜಯಿಯಾಗಿತ್ತು. ಶುಭಾ ಆಗಿನ ತಂಡದಲ್ಲೂ ಓಡಿದ್ದರು.

ಸಾಕಷ್ಟು ಹಿಂದೆಬಿದ್ದು, 3ನಿ.20.52 ಸೆ.ಗಳಲ್ಲಿ ಓಟ ಕ್ರಮಿಸಿದ ಚೀನಾ ತಂಡ ಮತ್ತು 3ನಿ.21.95 ಸೆ.ಗಳಲ್ಲಿ ಓಟ ಪೂರೈಸಿದ ಶ್ರೀಲಂಕಾ ತಂಡಗಳು ಎರಡು ಮತ್ತು ಮೂರನೇ ಸ್ಥಾನ ಪಡೆದರೂ, ನಂತರ ಈ ಎರಡೂ ತಂಡಗಳನ್ನು ಅನರ್ಹಗೊಳಿಸಲಾಯಿತು. ಇದಕ್ಕೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.

ಇವುಗಳ ಅನರ್ಹತೆಯಿಂದಾಗಿ ಕಜಕಸ್ಥಾನ (3:22.70) ಮತ್ತು ದಕ್ಷಿಣ ಕೊರಿಯಾ (3:22.87) ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡವು.

ಇದು ಭಾರತಕ್ಕೆ ಎರಡನೇ ಚಿನ್ನ. ಮೊದಲ ದಿನ 10,000 ಮೀ. ಓಟದಲ್ಲಿ ಗುಲ್ವೀರ್ ಸಿಂಗ್ ಅಗ್ರಸ್ಥಾನ ಪಡೆದಿದ್ದರು.

ತೇಜಸ್ವಿನ್‌ಗೆ ಬೆಳ್ಳಿ: ಬಹುತೇಕ ಅಮೆರಿಕದಲ್ಲೇ ನೆಲೆಸಿರುವ ತೇಜಸ್ವಿನ್‌ ಶಂಕರ್ ಹತ್ತು ಸ್ಪರ್ಧೆಗಳ ಡೆಕಥ್ಲಾನ್‌ನಲ್ಲಿ 7,618 ಪಾಯಿಂಟ್ಸ್ ಕಲೆಹಾಕಿ ಬೆಳ್ಳಿ ಪದಕ ಗೆದ್ದರು. ಚೀನಾದ ಫೀ ಷಿಯಾಂಗ್ (7634) ಅವರು 16 ಪಾಯಿಂಟ್‌ ಹೆಚ್ಚಿಗೆ ಪಡೆದು ಚಿನ್ನ ಗೆದ್ದರು. ಜಪಾನ್‌ನ ಕೀಸುಕೆ ಒಕುಡಾ (7602) ಕಂಚಿನ ಪದಕ ಪಡೆದರು.

ಪ್ರವೀಣ್ ಚಿತ್ರವೇಲ್ ಪುರುಷರ ಟ್ರಿಪಲ್‌ ಜಂಪ್‌ನಲ್ಲಿ 16.90 ಮೀ.ಗಳ ಜಿಗಿತದ ಉತ್ತಮ ಪ್ರಯತ್ನದೊಡನೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 

400 ಮೀ. ಓಟದಲ್ಲಿ ರೂಪಲ್ 52.68 ಸೆ.ಗಳಲ್ಲಿ ಓಟ ಪೂರೈಸಿ ಎರಡನೇ ಸ್ಥಾನ ಪಡೆದರು. ಭಾರತದ ಇನ್ನೊಬ್ಬ ಪ್ರಮುಖ ಓಟಗಾರ್ತಿ ವಿದ್ಯಾ ರಾಮರಾಜ್ (53.00 ಸೆ.) ನಾಲ್ಕನೇ ಸ್ಥಾನಕ್ಕೆ ಸರಿಯಬೇಕಾಯಿತು. ಈ ಓಟದಲ್ಲಿ ಜಪಾನ್‌ನ ನನಕೊ ಮತ್ಸುಮೋಟೊ (52.17 ಸೆ.) ಚಿನ್ನ ಗೆದ್ದರೆ, ಉಜ್ಬೇಕಿಸ್ತಾನದ ಜೊಂಬಿಬಿ ಹುಕ್ಮೊವಾ (52.79 ಸೆ.) ಕಂಚಿನ ಪದಕ ಗಳಿಸಿದರು.

ಮಹಿಳೆಯರ 1,500 ಮೀ. ಓಟವನ್ನು ಪೂಜಾ 4ನಿ.10.83 ಸೆ.ಗಳಲ್ಲಿ ಓಡಿ, ಭಾರತದ ಪದಕ ಪಟ್ಟಿಗೆ ಇನ್ನೊದು ಬೆಳ್ಳಿ ಸೇರಿಸಿದರು. ಚೀನಾದ ಲಿ ಚುನ್‌ಹುಯಿ (4ನಿ.10.58 ಸೆ.) ಅಗ್ರಸ್ಥಾನ ಪಡೆದರೆ, ಜಪಾನ್‌ನ ಟೊಮಕಾ ಕಿಮುರಾ ಕಂಚಿನ ಪದಕ ಗೆಲ್ಲುವ ಹಾದಿಯಲ್ಲಿ ತಮ್ಮ ವರ್ಷದ ಶ್ರೇಷ್ಠ ಕಾಲಾವಧಿ (4ನಿ.11.56ಸೆ.) ದಾಖಲಿಸಿದರು.

ಉತ್ತರ ಪ್ರದೇಶದ ಮೀರಠ್‌ ಜಿಲ್ಲೆಯ ಶಾಪುರ ಜೈನ್‌ಪುರ ಗ್ರಾಮದ ರೈತಾಪಿ ಕುಟುಂಬದಿಂದ ಬಂದಿರುವ ರೂಪಲ್ ಉದಯೋನ್ಮುಖ ಓಟಗಾರ್ತಿ ಎನಿಸಿದ್ದಾರೆ. 20 ವರ್ಷ ವಯಸ್ಸಿನ ಈ ಓಟಗಾರ್ತಿ, 2022ರ ವಿಶ್ವ 20 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ ಒಂದು ಬೆಳ್ಳಿ (4x400 ಮೀ.) ಮತ್ತು ಒಂದು ಕಂಚು (400 ಮೀ. ಓಟ) ಗೆದ್ದು ಮೊದಲ ಸಲ ಗಮನ ಸೆಳೆದಿದ್ದರು.

ಪುರುಷರ ವಿಭಾಗದ 1,500 ಮೀ. ಓಟವನ್ನು ಯೂನುಸ್‌ ಶಾ 3ನಿ.43.03 ಸೆ.ಗಳಲ್ಲಿ ಓಡಿ ಕಂಚಿನ ಪದಕ ಗೆದ್ದರು. ಜಪಾನ್‌ನಿ ಕಝುಟೊ ಲಿಝಾವ (3ನಿ.42.56 ಸೆ.) ತಮ್ಮ ವೈಯಕ್ತಿಕ ಶ್ರೇಷ್ಠ ಓಟ ಓಡಿ ಚಿನ್ನದ ಪದಕದ ಒಡೆಯರಾದರು. ದಕ್ಷಿಣ ಕೊರಿಯಾದ ಜೇಯುಂಗ್‌ ಲೀ (3ನಿ.42.79 ಸೆ.) ಬೆಳ್ಳಿ ಪದಕ ಗೆದ್ದರು.

ವಿಶಾಲ್ ತೆನ್ನರಸು ಅವರು ಪುರುಷರ 400 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಅವಧಿ (45.57 ಸೆ.) ದಾಖಲಿಸಿದರೂ, ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್ ಮತ್ತು ಆನ್ಸಿ ಸೋಜನ್ ಫೈನಲ್‌ಗೆ ಅರ್ಹತೆ ಪಡೆದರು. 20 ಮಂದಿಯ ಕಣದಲ್ಲಿ ಶೈಲಿ 6.17 ಮೀ.ಗಳ ಉತ್ತಮ ಯತ್ನದೊಡನೆ ಮೂರನೇ ಸ್ಥಾನದೊಡನೆ ಅರ್ಹತೆ ಪಡೆದರು. ಆನ್ಸಿ 6.14 ಮೀ. ದೂರ ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆದರು.

ಜ್ಯೋತಿ ಯರ್ರಾಜಿ 100 ಮೀ. ಹರ್ಡಲ್ಸ್‌ ಹೀಟ್ಸ್‌ನಲ್ಲಿ 13.18 ಸೆ.ಗಳ ಕಾಲಾವಧಿಯೊಡನೆ ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಅವರು ತಮ್ಮ ಹೀಟ್ಸ್‌ನಲ್ಲಿ ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.