ಸಾಂದರ್ಭಿಕ ಚಿತ್ರ
ಕ್ವಾಲಾಲಂಪುರ: ಅಮೋಘ ಸಾಧನೆ ತೋರಿದ ಭಾರತ ತಂಡದವರು, ಎರಡನೇ ಏಷ್ಯನ್ ಸ್ಕ್ವಾಷ್ ಡಬಲ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಮೂರೂ ಪ್ರಶಸ್ತಿಗಳನ್ನು (ಪುರುಷರ, ಮಹಿಳೆಯರ ಮತ್ತು ಮಿಶ್ರ ವಿಭಾಗ) ಕಬಳಿಸಿದರು.
ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಅಭಯ್ ಸಿಂಗ್– ವೆಲವನ್ ಸೆಂಥಿಲ್‌ಕುಮಾರ್ ಅವರು ಮೊದಲ ಸೆಟ್ ಕಳೆದುಕೊಂಡರೂ ಚೇತರಿಸಿ 2–1 ರಿಂದ (9–11, 11–5, 11–5) ಪಾಕಿಸ್ತಾನದ ಎದುರಾಳಿಗಳಾದ ನೂರ್ ಜಮಾನ್– ನಾಸಿರ್ ಇಕ್ಬಾಲ್ ಅವರನ್ನು ಮಣಿಸಿದರು.
ಭಾರತದ ಜೋಡಿ ಸೆಮಿಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎದುರಾಳಿಗಳನ್ನು ಮಣಿಸಿತ್ತು.
ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಅನುಭವಿ ಜೋಷ್ನಾ ಚಿಣ್ಣಪ್ಪ– ಅನಾಹತ್ ಸಿಂಗ್ 2–1 ರಿಂದ (8–11, 11–9, 11–10) ರಿಂದ ಮಲೇಷ್ಯಾದ ಐನಾ ಅಮಾನಿ– ಷಿನ್ ಯಿಂಗ್ ಯೀ ಜೋಡಿಯನ್ನು 35 ನಿಮಿಷಗಳಲ್ಲಿ ಸೋಲಿಸಿದರು. ಈ ವಿಭಾಗದಲ್ಲಿ ಭಾರತದ ಜೋಡಿ ಎರಡನೇ ಶ್ರೇಯಾಂಕ ಪಡೆದಿತ್ತು.
ಮಿಶ್ರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಅಭಯ್– ಅನಾಹತ್ ಜೋಡಿ, 28 ನಿಮಿಷಗಳವರೆಗೆ ನಡೆದ ಫೈನಲ್ ಪಂದ್ಯದಲ್ಲಿ 2–0 ಯಿಂದ (11-9, 11-7) ಮಲೇಷ್ಯಾದ ರಚೆಲ್ ಅರ್ನಾಲ್ಡ್– ಅಮೀಶನ್‌ರಾಜ್ ಚಂದ್ರನ್ ಜೋಡಿಯನ್ನು ಹಿಮ್ಮೆಟ್ಟಿಸಿತು. ಆ ಮೂಲಕ ಅಭಯ್ ಮತ್ತು ಅನಾಹತ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.