ಮೀನಾಕ್ಷಿ ಹೂಡಾ
ಲಿವರ್‌ಪೂಲ್: ಭಾರತದ ಜಾಸ್ಮಿನ್ ಲಂಬೋರಿಯಾ, ಮೀನಾಕ್ಷಿ ಹೂಡಾ ಮತ್ತು ನೂಪುರ್ ಶೆರಾನ್ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಫೈನಲ್ ಪ್ರವೇಶಿಸಿದರು.
ಆದರೆ, ಪುರುಷರು 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬರಿಗೈಲಿ ವಾಪಸಾಗಬೇಕಾಯಿತು.
ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಜಾಸ್ಮಿನ್ 5-0 ಅಂತರದಿಂದ ವೆನೆಜುವೆಲಾದ ಒಮೈಲಿನ್ ಅಲ್ಕಾಲಾ ಅವರನ್ನು ಮಣಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು.
ನೂಪುರ್ ಶೆವೊರಾನ್ (80+ ಕೆ.ಜಿ.) ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಟರ್ಕಿಯ ಸೆಮಾ ಡುಜ್ತಾಸ್ ಅವರನ್ನು 5–0 ಅಂತರದಿಂದ ಹಿಮ್ಮೆಟ್ಟಿಸಿದರು.
ಮೀನಾಕ್ಷಿ ಅವರು ಮಹಿಳೆಯರ 48 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಶನಿವಾರ 5–0ಯಿಂದ ಎರಡು ಬಾರಿಯ ಏಷ್ಯನ್ ಕಂಚಿನ ಪದಕ ವಿಜೇತೆ ಲೂತ್ಸೈಖನಿ ಅಲ್ತಾಂತ್ ಸೆಟ್ಸೆಗ್ (ಮಂಗೋಲಿಯಾ) ಅವರನ್ನು ಮಣಿಸಿದರು.
ಪುರುಷರ ವಿಭಾಗದಲ್ಲಿ ಸ್ಪರ್ಧೆಯಲ್ಲುಳಿದಿದ್ದ ಭಾರತದ ಏಕೈಕ ಸ್ಪರ್ಧಿ ಜಾದುಮಣಿ ಸಿಂಗ್ ಅವರು 50 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಂಝಾರ್ ತಾಷ್ಕೆಂಬೆ (ಕಜಾಕಸ್ತಾನ) ವಿರುದ್ಧ 0–4ರಿಂದ ಪರಾಭವಗೊಂಡರು. ಅದರೊಂದಿಗೆ, ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ 10 ಪುರುಷ ಬಾಕ್ಸರ್‌ಗಳು ಪದಕ ಗೆಲ್ಲದೆ ಅಭಿಯಾನ ಮುಗಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.