ADVERTISEMENT

ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ

ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಷಿಪ್‌ ಇಂದಿನಿಂದ

ಪಿಟಿಐ
Published 2 ಫೆಬ್ರುವರಿ 2026, 17:13 IST
Last Updated 2 ಫೆಬ್ರುವರಿ 2026, 17:13 IST
ತನ್ವಿ ಶರ್ಮಾ
ತನ್ವಿ ಶರ್ಮಾ   

ಕಿಂಗ್ಡಾವೊ (ಚೀನಾ): ಅನುಭವಿ ಪಿ.ವಿ. ಸಿಂಧು ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತ ಮಹಿಳಾ ತಂಡವು ಮಂಗಳವಾರ ಇಲ್ಲಿ ಆರಂಭವಾಗುವ ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದೆ. ಪುರುಷರ ತಂಡವು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. 

2024ರಲ್ಲಿ (ಮಲೇಷ್ಯಾ) ನಡೆದ ಕೊನೆಯ ಆವೃತ್ತಿಯಲ್ಲಿ ಭಾರತದ ಮಹಿಳಾ ತಂಡವು ಚೊಚ್ಚಲ ಚಿನ್ನ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮೆರೆದಿತ್ತು. ಆ ತಂಡದಲ್ಲಿ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಇದ್ದರು. ಆದರೆ, ಈ ಬಾರಿ ಅವರು ಹಿಂದೆ ಸರಿದಿರುವುದು ಭಾರತದ ಪದಕದ ನಿರೀಕ್ಷೆಗೆ ಆರಂಭಿಕ ಹೊಡೆತ ನೀಡಿದೆ. ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.

ಪಂಜಾಬ್‌ನ 17 ವರ್ಷದ ತನ್ವಿ ಅವರು 2024ರಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದರು. ಆದರೆ, ಯಾವುದೇ ಪಂದ್ಯಗಳನ್ನು ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಗುವಾಹಟಿಯಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಅಮೆರಿಕ ಓಪನ್ ಸೂಪರ್ 300 ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿ ಭರವಸೆ ಮೂಡಿಸಿದ್ದಾರೆ.

ADVERTISEMENT

18 ವರ್ಷದ ಉನ್ನತಿ ಹೂಡಾ 2025ರ ಯಶಸ್ವಿ ಋತುವಿನ ನಂತರ ಈ ಟೂರ್ನಿಗೆ ಮರಳಿದ್ದಾರೆ. ಅವರು ವೃತ್ತಿಜೀವನದ ಉನ್ನತ 23ನೇ ಕ್ರಮಾಂಕವನ್ನು ಗಳಿಸಿದ್ದಾರೆ. ಚೀನಾ ಓಪನ್‌ನಲ್ಲಿ ಸಿಂಧು ಅವರಿಗೆ ಆಘಾತ ನೀಡಿದ್ದರು. 2025ರ ಋತುವನ್ನು ಒಡಿಶಾ ಮಾಸ್ಟರ್ಸ್‌ ಪ್ರಶಸ್ತಿಯೊಂದಿಗೆ ಮುಗಿಸಿದ್ದರು.

ಉಳಿದಂತೆ ಮಾಳವಿಕಾ ಬನ್ಸೋದ್‌ ಮತ್ತು ರಕ್ಷಿತಾ ರಾಮರಾಜ್ ಅವರು ಸಿಂಗಲ್ಸ್‌ ಜವಾಬ್ದಾರಿಯನ್ನು ಹಂಚಿಕೊಳ್ಳುವರು. ಅನುಭವಿ ಗಾಯತ್ರಿ ಗೋಪಿಚಂದ್, ಟ್ರೀಸಾ ಜೋಳಿ ಜೋಡಿಯೊಂದಿಗೆ ಪ್ರಿಯಾ ಕೊಂಜೆಂಗ್‌ಬಮ್, ಶ್ರುತಿ ಮಿಶ್ರಾ, ತನಿಶಾ ಕ್ರಾಸ್ಟೊ ಅವರು ಡಬಲ್ಸ್ ಸವಾಲನ್ನು ಮುನ್ನಡೆಸಲಿದ್ದಾರೆ.

ಭಾರತ ಮಹಿಳಾ ತಂಡವು ವೈ ಗುಂಪಿನಲ್ಲಿದ್ದರು ಬುಧವಾರ ಮ್ಯಾನ್ಮಾರ್‌ ವಿರುದ್ಧ ಅಭಿಯಾನ ಆರಂಭಿಸಲಿದೆ. ನಂತರದಲ್ಲಿ ಥಾಯ್ಲೆಂಡ್‌ ತಂಡದೊಂದಿಗೆ ಸೆಣಸಲಿದೆ.

2016 ಮತ್ತು 2020ರಲ್ಲಿ ಕಂಚಿನ ಪದಕವನ್ನು ಗೆದ್ದಿರುವ ಭಾರತದ ಪುರುಷ ತಂಡವು ಈ ಬಾರಿ ಸುಧಾರಿತ ಪ್ರದರ್ಶನದ ಛಲದಲ್ಲಿದೆ. 2022ರ ಥಾಮಸ್ ಕಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ತಂಡದಲ್ಲಿದ್ದ ಆಟಗಾರರನ್ನೇ ಇಲ್ಲೂ ಕಣಕ್ಕಿಳಿಸಲಾಗಿದೆ. 

ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತೆರಾದ ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಎಚ್‌.ಎಸ್. ಪ್ರಣಯ್‌ ಅವರು ಸಿಂಗಲ್ಸ್‌ ಸವಾಲನ್ನು ಮುನ್ನಡೆಸುವರು. 13ನೇ ಕ್ರಮಾಂಕದ ಲಕ್ಷ್ಯ ಉತ್ತಮ ಲಯದಲ್ಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಅವರು ಹಾಂಗ್ ಕಾಂಗ್ ಓಪನ್‌ ಫೈನಲ್ ತಲುಪಿದ್ದರು. ಶ್ರೀಕಾಂತ್ ಅವರು ಮಲೇಷ್ಯಾ ಮಾಸ್ಟರ್ಸ್ ಮತ್ತು ಸೈಯದ್ ಮೋದಿ ಇಂಟರ್‌ ನ್ಯಾಷನಲ್‌ನಲ್ಲಿ ಫೈನಲ್ ತಲುಪಿದ್ದರು. ಆದರೆ, ಪ್ರಣಯ್‌ ಲಯಕ್ಕೆ ಪರದಾಡುತ್ತಿದ್ದಾರೆ. 

ಅಮೆರಿಕದ ಓಪನ್ ಸೂಪರ್ 300 ಗೆದ್ದ ಉದಯೋನ್ಮುಖ ತಾರೆ ಆಯುಷ್ ಶೆಟ್ಟಿ ಮತ್ತು ತರುಣ್ ಮನ್ನೆಪಳ್ಳಿ ಸಿಂಗಲ್ಸ್‌ನ ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ. ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ, ಚಿರಾಗ್‌ ಶೆಟ್ಟಿ ಅವರೊಂದಿಗೆ ಸಾಯಿ ಪ್ರತೀಕ್ ಕೆ, ಪೃಥ್ವಿ ಕೃಷ್ಣಮೂರ್ತಿ ರಾಯ್ ಮತ್ತು ಹರಿಹರನ್ ಅಂಶಕರುಣನ್ ಅವರು ಡಬಲ್ಸ್‌ನಲ್ಲಿ ಆಡುವರು. 

ಸಿ ಗುಂಪಿನಲ್ಲಿರುವ ಭಾರತ ಪುರುಷರ ತಂಡವು ಬುಧವಾರ ಸಿಂಗಪುರ ವಿರುದ್ಧ ಕಣಕ್ಕಿಳಿಯಲಿದೆ. ನಂತರದಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.