ಭಾರತ ತಂಡದ ಆಟಗಾರ್ತಿ ನೇಹಾ
–ಎಕ್ಸ್ ಚಿತ್ರ
ಲಂಡನ್: ಆಸ್ಟ್ರೇಲಿಯಾ ತಂಡಕ್ಕೆ ಮೂರು ಗೋಲುಗಳನ್ನು ಬಿಟ್ಟುಕೊಟ್ಟ ನಂತರ ದಿಟ್ಟ ಹೋರಾಟ ತೋರಿದ ಭಾರತದ ವನಿತೆಯರು ಶನಿವಾರ ನಡೆದ ಎಫ್‌ಐಎಚ್ ಪ್ರೊ ಲೀಗ್ ಲಂಡನ್ ಲೆಗ್‌ನ ಪಂದ್ಯದಲ್ಲಿ 2-3 ಗೋಲುಗಳ ಅಂತರದಿಂದ ಪರಾಭವಗೊಂಡರು.
ಲೀಗ್‌ನಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ಭಾರತ ತಂಡವು ಎರಡು ಗೆಲುವು, ಎರಡು ಡ್ರಾ ಮತ್ತು ಐದು ಸೋಲಿನೊಂದಿಗೆ 9 ಅಂಕ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (11) ಆರನೇ ಸ್ಥಾನದಲ್ಲಿದೆ.
ಭಾರತದ ಪರ ದೀಪಿಕಾ (43ನೇ) ಮತ್ತು ನೇಹಾ (51ನೇ) ಗೋಲು ಗಳಿಸಿದರು. ಈ ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ನಿಂದ ಲಭಿಸಿದವು. ಆಸ್ಟ್ರೇಲಿಯಾ ಪರ ಕೋರ್ಟ್ನಿ ಸ್ಕೋನೆಲ್ (16ನೇ ನಿಮಿಷ), ಲೆಕ್ಸಿ ಪಿಕರಿಂಗ್ (23ನೇ ನಿ.) ಮತ್ತು ಟ್ಯಾಟಂ ಸ್ಟೀವರ್ಟ್ (35ನೇ ನಿ.) ಗೋಲು ದಾಖಲಿಸಿದರು.
ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ತುರುಸಿನ ಪೈಪೋಟಿ ನಡೆಯಿತು. ಒಂಬತ್ತನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪಡೆದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಯಶಸ್ವಿಯಾಗಿ ತಡೆಯಿತು. ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಸ್ಕೋನೆಲ್ ಗೋಲು ದಾಖಲಿಸಿ, ಆಸ್ಟ್ರೇಲಿಯಾಕ್ಕೆ ಮುನ್ನಡೆ ಒದಗಿಸಿದರು. ಅದಾದ ಆರು ನಿಮಿಷದಲ್ಲೇ ಲೆಕ್ಸಿ ಚೆಂಡನ್ನು ಗುರಿ ಸೇರಿಸಿದರು. ಹೀಗಾಗಿ, ಮಧ್ಯಂತರದ ವೇಳೆಗೆ ಎದುರಾಳಿ ತಂಡ 2–0ಯಿಂದ ಪ್ರಾಬಲ್ಯ ಸಾಧಿಸಿತು.
ಮೂರನೇ ಕ್ವಾರ್ಟರ್‌ನ ಐದನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಸ್ಟೀವರ್ಟ್ ಅವರು ಆಸ್ಟ್ರೇಲಿಯಾದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಈ ಕ್ವಾರ್ಟರ್‌ನ ಅಂತ್ಯದಲ್ಲಿ ದೀಪಿಕಾ ಗೋಲು ದಾಖಲಿಸಿ, ಭಾರತದ ಹಿನ್ನಡೆಯನ್ನು ಕೊಂಚ ತಗ್ಗಿಸಿದರು.
ಕೊನೆಯ ಕ್ವಾರ್ಟರ್‌ನ ಆರಂಭದಲ್ಲೇ ಭಾರತ ಸತತ ಎರಡೂ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಎರಡನ್ನೂ ವ್ಯರ್ಥ ಮಾಡಿತು. ಈ ಮಧ್ಯೆ ನೇಹಾ 52ನೇ ನಿಮಿಷದಲ್ಲಿ ರಿಬೌಂಡ್ ಮೂಲಕ ಗೋಲು ಗಳಿಸಿದರು. ಪಂದ್ಯ ಮುಗಿಯಲು ಎರಡು ನಿಮಿಷ ಇರುವಂತೆ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆಯಿತು. ಅದನ್ನೂ ಕೈಚೆಲ್ಲಿ, ಡ್ರಾ ಸಾಧಿಸುವ ಅವಕಾಶವನ್ನೂ ಹಾಳು ಮಾಡಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.