ADVERTISEMENT

ಏಷ್ಯನ್‌ ಗೇಮ್ಸ್‌ 2018: ಭಾರತದ ವರ್ಷಾ, ಶ್ವೇತಾಗೆ ಬೆಳ್ಳಿಯ ಹರ್ಷ

ಸೇಲಿಂಗ್‌: ಹರ್ಷಿತಾಗೆ ವೈಯಕ್ತಿಕ; ವರುಣ್ ಅಶೋಕ್‌–ಗಣಪತಿ ಚೆಂಗಪ್ಪ ಜೋಡಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 12:51 IST
Last Updated 31 ಆಗಸ್ಟ್ 2018, 12:51 IST
ಭಾರತದ ಹರ್ಷಿತಾ ತೋಮರ್ ಮುನ್ನುಗ್ಗಿದ ಪರಿ -ರಾಯಿಟರ್ಸ್ ಚಿತ್ರ
ಭಾರತದ ಹರ್ಷಿತಾ ತೋಮರ್ ಮುನ್ನುಗ್ಗಿದ ಪರಿ -ರಾಯಿಟರ್ಸ್ ಚಿತ್ರ   

ಜಕಾರ್ತ: ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳು ಸೇಲಿಂಗ್‌ನಲ್ಲಿ ಶುಕ್ರವಾರ ಗಮನಾರ್ಹ ಸಾಧನೆ ಮಾಡಿದರು.

ರಾಷ್ಟ್ರೀಯ ಸೇಲಿಂಗ್ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಕೊಯಮತ್ತೂರಿನ ವರ್ಷಾ ಗೌತಮ್‌ ಮತ್ತು ಮುಂಬೈನ ಶ್ವೇತಾ ಶೇರ್ವೆಗಾರ್ ಮಹಿಳೆಯರ 49 ಇಆರ್ ಎಫ್‌ಎಕ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇಬ್ಬರೂ ಒಟ್ಟಾಗಿ 15 ರೇಸ್‌ಗಳ ಅಂತ್ಯದಲ್ಲಿ ಒಟ್ಟು 40 ಸ್ಕೋರ್‌ ಕಲೆ ಹಾಕಿದರು.

ಸಿಂಗಪುರದ ಲಿಮ್ ಕಿಂಬರ್ಲಿ ಮತ್ತು ರೋ ರುಯಿ ಸಿಸಿಲಿಯಾ ಎದುರು ಫೈನಲ್‌ನಲ್ಲಿ ಭಾರತದ ಸೇಲರ್‌ಗಳು ಸೋಲೊಪ್ಪಿಕೊಂಡರು. ಥಾಯ್ಲೆಂಡ್‌ನ ವಾಯ್‌ ವಾಯ್ ನಿಚ್ಪಾ ಮತ್ತು ಕ್ಲಾವನ್ ಕ್ಲವೊಂಚಾಂಕ್‌ ಕಂಚಿನ ಪದಕ ಗೆದ್ದರು.

ADVERTISEMENT

ಲೇಸರ್‌ 4.7 ಮುಕ್ತ ವಿಭಾಗದ 12 ರೇಸ್‌ಗಳ ಕೊನೆಯಲ್ಲಿ 62 ಸ್ಕೋರ್ ಗಳಿಸಿದ ಹರ್ಷಿತಾ ತೋಮರ್‌ ಅವರು ಕಂಚು ಗೆದ್ದರು. ಮಲೇಷ್ಯಾದ ಕಮಾನ್ ಷಾ ಮೊಹಮ್ಮದ್‌ ಮತ್ತು ಚೀನಾದ ವಾಂಗ್ ಜಿಯಾಂಗ್‌ಶಾಂಗ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಹರ್ಷಿತಾ ಕೊನೆಗೆ ಕಂಚಿಗೆ ತೃಪ್ತಿಪಟ್ಟುಕೊಂಡರು. ಭಾರತದ ಗೋವಿಂದ ಬೈರಾಗಿ ನಾಲ್ಕನೇ ಸ್ಥಾನ ಗಳಿಸಿದರು.

ಪುರುಷರ 49 ಇಆರ್‌ ರೇಸ್‌ನಲ್ಲಿ ಚೆನ್ನೈನ ಜೋಡಿಯಾದ ವರುಣ್ ಅಶೋಕ್‌ ಠಕ್ಕರ್‌ ಮತ್ತು ಕೇಳಪಂಡ ಗಣಪತಿ ಚೆಂಗಪ್ಪ ಕಂಚು ಗೆದ್ದರು. 15 ರೇಸ್‌ಗಳ ನಂತರ ಅವರು ಒಟ್ಟು 53 ಪಾಯಿಂಟ್ ಕಲೆ ಹಾಕಿದರು.

ಜಪಾನ್‌ನ ಫುರುಯಾ ಶಿಂಗೆನ್‌ ಮತ್ತು ಹಚಿಯಾಮ ಶಿಂಜಿ ಜೋಡಿ ಚಿನ್ನ ಗೆದ್ದರೆ ದಕ್ಷಿಣ ಕೊರಿಯಾದ ಚೆ ಬೊಂಜಿನ್‌ ಮತ್ತು ಕಿಮ್ ಡಾಂಗ್‌ವೂಕ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.