ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಕಂಚಿನ ಪದಕದ ಸುತ್ತಿಗೆ ಭಾರತ ತಂಡಗಳು

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌

ಪಿಟಿಐ
Published 12 ಜುಲೈ 2022, 13:29 IST
Last Updated 12 ಜುಲೈ 2022, 13:29 IST
ಮೆಹುಲಿ ಘೋಷ್‌
ಮೆಹುಲಿ ಘೋಷ್‌   

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಟೂರ್ನಿಯ 10 ಮೀಟರ್ಸ್ ಏರ್‌ ಪಿಸ್ತೂಲ್‌ ಮತ್ತು ಏರ್ ರೈಫಲ್ ಸ್ಪರ್ಧೆಯ ಮಿಶ್ರ ತಂಡ ವಿಭಾಗಗಳಲ್ಲಿ ಕಂಚಿನ ಪದಕದ ಸುತ್ತು ತಲುಪಿದರು.

30 ತಂಡಗಳಿದ್ದ ಏರ್‌ ರೈಫಲ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಶಾಹು ತುಷಾರ್ ಮಾನೆ ಮತ್ತು ಮೆಹುಲಿ ಘೋಷ್‌ ಅಗ್ರಸ್ಥಾನ ಗಳಿಸಿದರು. ಒಟ್ಟು 634.3 ಪಾಯಿಂಟ್ಸ್ ಕಲೆಹಾಕಿದರು. ಹಂಗರಿಯ ಇಸ್ತವಾನ್ ಪೆನಿ ಮತ್ತು ಈಸ್ತರ್ ಮೆಸ್‌ಜರೋಸ್‌ ಜೋಡಿ (630.3) ಎರಡನೇ ಸ್ಥಾನ ಗಳಿಸಿತು.

ಶಿವ ನರ್ವಾಲ್‌ ಮತ್ತು ಪಲಕ್‌ (574) ಅವರಿದ್ದ ತಂಡ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಮೂರನೇ ಸ್ಥಾನ ಗಳಿಸಿತು.

ADVERTISEMENT

ಕಂಚಿನ ಪದಕದ ಸುತ್ತಿನ ಪಂದ್ಯಗಳು ಬುಧವಾರ ನಡೆಯಲಿವೆ.

10 ಮೀ. ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೊಂದು ಜೋಡಿ ನವೀನ್ ಮತ್ತು ರಿಧಮ್ ಸಂಗ್ವಾನ್, ಏರ್‌ ರೈಫಲ್ ವಿಭಾಗದಲ್ಲಿದ್ದ ಅರ್ಜುನ್ ಬಬೂತಾ ಮತ್ತು ಇಳವೆನ್ನಿಲ್ ವಾಳರಿವನ್‌ ಎಂಟನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿದರು.

ಗುರಿ ತಪ್ಪಿದ ಶೂಟರ್‌ಗಳು: ಇದಕ್ಕೂ ಮೊದಲು ಪದಕದ ಸುತ್ತುಗಳಲ್ಲಿ ಭಾರತದ ಸ್ಪರ್ಧಿಗಳು ಸ್ವಲ್ಪದರಲ್ಲೇ ವಿಫಲರಾದರು. 10 ಮೀ. ಏರ್‌ ಪಿಸ್ತೂಲ್‌ನಲ್ಲಿ ನವೀನ್‌ 250.7 ಪಾಯಿಂಟ್ಸ್ ಗಳಿಸಿ ನಾಲ್ಕನೇ ಸ್ಥಾನ ಗಳಿಸಿದರು. ಶಿವ ನರ್ವಾಲ್ ಐದು ಮತ್ತು ಸಾಗರ್ ಡಾಂಗಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಯುವಿಕಾ ಥೋಮರ್‌ ಏಳನೇ ಸ್ಥಾನ ಗಳಿಸಿದರು. ಪುರುಷರ ಟ್ರ್ಯಾಪ್ ಸ್ಪರ್ಧೆಯ ರ‍್ಯಾಂಕಿಂಗ್‌ ಸುತ್ತಿನಲ್ಲಿ ವಿವಾನ್ ಕಪೂರ್ ಮೂರನೇ ಸ್ಥಾನ ಪಡೆದರು.

ಭಾರತ ಇದುವರೆಗೆ ಟೂರ್ನಿಯಲ್ಲಿ ಒಂದು ಚಿನ್ನ ಗೆದ್ದಿದ್ದು, ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.