ADVERTISEMENT

ಬಾಕ್ಸಿಂಗ್ ತಂಡದ ಉನ್ನತಾಧಿಕಾರಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 13:27 IST
Last Updated 14 ಮಾರ್ಚ್ 2024, 13:27 IST
   

ನವದೆಹಲಿ: ಪ್ರಥಮ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಾಯಕ ಪ್ರದರ್ಶನದ ಬೆನ್ನಲ್ಲೇ ಹೈ ಪರ್ಫಾಮೆನ್ಸ್ ಡೈರೆಕ್ಟರ್‌ (ಎಚ್‌ಪಿಡಿ) ಬರ್ನಾಡ್‌ ಡನ್‌ ಅವರು ಹುದ್ದೆ ತ್ಯಜಿಸಿದ್ದಾರೆ. ತಂಡದ ವಿದೇಶಿ ತರಬೇತುದಾರ ದಿಮಿಟ್ರಿ ಮಿಟ್ರುಕ್ ಅವರನ್ನೂ ಶೀಘ್ರವೇ ಕೈಬಿಡುವ ಸಾಧ್ಯತೆಯಿದೆ.

ಐರ್ಲೆಂಡ್‌ನ ವೃತ್ತಿಪರ ಬಾಕ್ಸರ್‌ ಆಗಿರುವ ಡನ್‌ ಅವರನ್ನು 2022ರ ಅಕ್ಟೋಬರ್‌ನಲ್ಲಿ ಎಚ್‌ಪಿಡಿ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಅವರು ಇಟಲಿಯಿಂದಲೇ ರಾಜೀನಾಮೆ ಕಳುಹಿಸಿದ್ದಾರೆ. ಇಟಲಿಯ ಬುಸ್ಟೊ ಅರ್ಜಿಸಿಯೊದಲ್ಲಿ ಪ್ರಥಮ ವಿಶ್ವ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ ನಡೆಯುತ್ತಿದ್ದು ಅವರು ಭಾರತ ತಂಡದ ಜೊತೆಗಿದ್ದಾರೆ.

ಒಲಿಂಪಿಕ್ಸ್‌ಗೆ ಕೇವಲ ನಾಲ್ಕು ತಿಂಗಳು ಇರುವಾಗ ನಡೆದ ಈ ಬೆಳವಣಿಗೆ ಕೋಚಿಂಗ್ ಬಿಕ್ಕಟ್ಟನ್ನು ಸೃಷ್ಟಿಸಿದೆ.

ADVERTISEMENT

ಎರಡು ಅರ್ಹತಾ ಟೂರ್ನಿಗಳ– ಏಷ್ಯನ್‌ ಗೇಮ್ಸ್ ಮತ್ತು ಪ್ರಥಮ ವಿಶ್ವ ಒಲಿಂಪಿಕ್ಸ್ ಅರ್ಹತಾ ಟೂರ್ನಿ–ನಂತರ ಇದುವರೆಗೂ ಭಾರತದ ಪುರುಷರ ತಂಡದಿಂದ ಒಬ್ಬನೇ ಒಬ್ಬ ಬಾಕ್ಸರ್‌ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿಲ್ಲ.

ಪರಿಸ್ಥಿತಿಯ ಅವಲೋಕನ ನಡೆಸಲು ಬಾಕ್ಸಿಂಗ್ ಫೆಡರೇಷನ್ ಆಫ್‌ ಇಂಡಿಯಾ ಶುಕ್ರವಾರ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದಿದೆ.

‘ಶುಕ್ರವಾರ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದೇವೆ. ಅಲ್ಲಿ ಪರಿಸ್ಥಿತಿ ವಿಮರ್ಶಿಸುತ್ತೇವೆ. ದಿಮಿತ್ರಿ ಭವಿಷ್ಯದ ಬಗ್ಗೆಯೂ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಫೆಡರೇಷನ್‌ನ ಮಹಾ ಕಾರ್ಯದರ್ಶಿ ಹೇಮಂತ ಕಲಿಟಾ ಸುದ್ಧಿಸಂಸ್ಥೆಗೆ  ತಿಳಿಸಿದರು.

ದಿಮಿತ್ರಿ ಕಳೆದ ವರ್ಷದ ಫೆಬ್ರುವರಿಯಲ್ಲಿ ಭಾರತ ಬಾಕ್ಸಿಂಗ್ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು.

ಒಲಿಂಪಿಕ್ಸ್‌ಗೆ ಅಂತಿಮ ಅರ್ಹತಾ ಟೂರ್ನಿ ಆರಂಭವಾಗಲು ಎರಡೇ ತಿಂಗಳು ಇದ್ದು, ಅದಕ್ಕೆ ಮೊದಲು ಭಾರತೀಯ ಕೋಚ್‌ಗಳ ನೇಮಕಕ್ಕೆ ಫೆಡರೇಷನ್‌ ಮುಂದಾಗಿದೆ. ‘ಇನ್ನು ವಿದೇಶಿ ಕೋಚ್‌ಗಳು ಇರುವುದಿಲ್ಲ. ನಾವು ಭಾರತೀಯ ಕೋಚ್‌ಗಳ ನೇಮಕ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ಸಿ.ಎ.ಕುಟ್ಟಪ್ಪ ಅವರು ಸದ್ಯ ಪುರುಷರ ತಂಡದ ಜೊತೆಯಿದ್ದಾರೆ. ಆದರೆ ಮಹಿಳಾ ತಂಡಕ್ಕೆ ಕೋಚ್ ಇಲ್ಲ. ಭಾಸ್ಕರ್‌ ಭಟ್‌ ಅವರು ಕಳೆದು ವರ್ಷದ ಜೂನ್‌ನಲ್ಲಿ ರಾಜೀನಾಮೆ ನೀಡಿದ್ದು ಯುವ ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಥಮ ವಿಶ್ವ ಒಲಿಂಪಿಕ್‌ ಕ್ವಾಲಿಫೈಯರ್ಸ್‌ನಲ್ಲಿ ಭಾರತದ ಪ್ರದರ್ಶನ ದಯನೀಯವಾಗಿತ್ತು. ಎಲ್ಲ ಒಂಬತ್ತು ಮಂದಿ ಬಾಕ್ಸರ್‌ಗಳು (ಇಬ್ಬರು ಮಹಿಳಾ ಮತ್ತು ಆರು ಪುರುಷರ ತಂಡ) ಬರಿಗೈಲಿ ಮರಳಿದ್ದಾರೆ.

ನಿಶಾಂತ್ ದೇವ್‌ (71 ಕೆ.ಜಿ) ಅವರನ್ನುಳಿದು ಇತರ ಎಲ್ಲರೂ ಮೊದಲ ಸುತ್ತಿನಲ್ಲೇ ಗಂಟುಮೂಟೆ ಕಟ್ಟಿದ್ದರು. ಸೋತ ರೀತಿಯೂ ಚಿಂತಕರ ಚಾವಡಿಯನ್ನು ಚಿಂತೆಗೆ ದೂಡಿದೆ.

ಒಲಿಂಪಿಕ್ಸ್‌ಗೆ ಈ ಮೊದಲೇ ಅರ್ಹತೆ ಪಡೆದ ನಾಲ್ವರೂ ಮಹಿಳೆಯರು. ಅವರೆಂದರೆ ಎರಡು ಸಲದ ವಿಶ್ವ ಚಾಂಪಿಯನ್ ನಿಖತ್‌ ಝರೀನ್ (50 ಕೆ.ಜಿ), ಪ್ರೀತಿ ಪವಾರ್‌ (54 ಕೆ.ಜಿ), ಪರ್ವೀನ್ ಹೂಡಾ (57 ಕೆ.ಜಿ) ಮತ್ತು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಪ್ಯಾರಿಸ್‌ಗೆ ಟಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.