ADVERTISEMENT

ಜರ್ಮನ್‌ಪ‍್ರೀತ್ ಗೋಲು: ಡ್ರಾ ಪಂದ್ಯದಲ್ಲಿ ಭಾರತ

ಪಿಟಿಐ
Published 3 ಮಾರ್ಚ್ 2021, 11:31 IST
Last Updated 3 ಮಾರ್ಚ್ 2021, 11:31 IST
ಜರ್ಮನ್‌ಪ್ರೀತ್ ಸಿಂಗ್‌ (ಬಲ)–ಹಾಕಿ ಇಂಡಿಯಾ ಟ್ವಿಟರ್‌ ಚಿತ್ರ
ಜರ್ಮನ್‌ಪ್ರೀತ್ ಸಿಂಗ್‌ (ಬಲ)–ಹಾಕಿ ಇಂಡಿಯಾ ಟ್ವಿಟರ್‌ ಚಿತ್ರ   

ಕ್ರೆಫೆಲ್ಡ್‌, ಜರ್ಮನಿ:ಯೂರೋಪ್ ಪ್ರವಾಸದಲ್ಲಿರುವ ಭಾರತ ಹಾಕಿ ತಂಡವು ಬುಧವಾರ ಎರಡನೇ ಪಂದ್ಯದಲ್ಲಿ ಜರ್ಮನಿ ತಂಡದೊಂದಿಗೆ 1–1 ಗೋಲುಗಳ ಸಮಬಲ ಸಾಧಿಸಿತು.

ಪ‍ಂದ್ಯದ ನಾಲ್ಕನೇ ನಿಮಿಷದಲ್ಲೇ ಗೋಲು ಗಳಿಸಿದ ಜರ್ಮನ್‌ಪ್ರೀತ್ ಸಿಂಗ್ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಸಮಬಲದ ಗೋಲು ದಾಖಲಿಸಿದ ಜರ್ಮನಿಯ ಮಾರ್ಟಿನ್ ಹನೆರ್‌ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡವು, ಮೊದಲ ಪಂದ್ಯದಲ್ಲಿ 6–1ರಿಂದ ಜಯ ಗಳಿಸಿ ಪಾರಮ್ಯ ಮೆರೆದಿತ್ತು. ಈ ಪಂದ್ಯದಲ್ಲೂ ಆಕ್ರಮಣಕಾರಿಯಾಗಿ ಆಟ ಪ್ರಾರಂಭಿಸಿತ್ತು. ಹೀಗಾಗಿ ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಸಿಕ್ಕಿತು. ಇದನ್ನು ಸೊಗಸಾದ ಹೊಡೆತದ ಮೂಲಕ ಗೋಲಾಗಿಸುವಲ್ಲಿ ಜರ್ಮನ್‌ಪ್ರೀತ್‌ ಯಶಸ್ವಿಯಾದರು.

ADVERTISEMENT

ಇದಾದ ಎರಡು ನಿಮಿಷಗಳ ಬಳಿಕ ಆತಿಥೇಯ ತಂಡಕ್ಕೂ ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ಯಶಸ್ಸು ದೊರೆಯಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಪ್ರವಾಸಿ ಬಳಗ ಒತ್ತಡವನ್ನು ಹೆಚ್ಚಿಸಿತು.

ಎರಡನೇ ಕ್ವಾರ್ಟರ್‌ನಲ್ಲಿ ತಾಂತ್ರಿಕ ಕೌಶಲಗಳನ್ನು ಪ್ರದರ್ಶಿಸಿದ ಜರ್ಮನಿ ತಂಡವು ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗಳಿಸಿತು. ಮೊದಲಾರ್ಧದ ಅಂತ್ಯಕ್ಕೆ ಕೆಲವೇ ನಿಮಿಷಗಳಿರುವಾಗ ಪೆನಾಲ್ಟಿ ಅವಕಾಶದಲ್ಲೇ ಮಾರ್ಟಿನ್‌ ಮೋಡಿ ಮಾಡಿದರು. ಪಂದ್ಯ 1–1 ಸಮಬಲವಾಯಿತು.

ಇದಾದ ಬಳಿಕ ಆತಿಥೇಯ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ ಭಾರತದ ಡಿಫೆಂಡರ್‌ಗಳ ಚುರುಕಿನ ಆಟದ ಮುಂದೆ ಆ ತಂಡಕ್ಕೆ ಯಶಸ್ಸು ದೊರೆಯಲಿಲ್ಲ. ನಂತರ ಇತ್ತಂಡಗಳು ಭಾರಿ ಪೈಪೋಟಿ ನಡೆಸಿದರೂ ಗೋಲು ದಾಖಲಾಗಲಿಲ್ಲ.

ಭಾರತ ತಂಡವು ಶನಿವಾರ ನಡೆಯುವ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ಅನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.