ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
ಪಿಟಿಐ ಚಿತ್ರ
ಪ್ಯಾರಿಸ್: ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರು ಎರಡು ವರ್ಷಗಳಲ್ಲಿ ಮೊದಲ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದುಕೊಂಡರು. ಶುಕ್ರವಾರ ರಾತ್ರಿ ಇಲ್ಲಿ ನಡೆದ ಕೂಟದಲ್ಲಿ ಅವರು ಜರ್ಮನಿಯ ಪ್ರತಿಸ್ಪರ್ಧಿ ಜೂಲಿಯನ್ ವೆಬರ್ ಅವರನ್ನು ಹಿಂದೆಹಾಕಿ ಅಗ್ರಸ್ಥಾನ ಪಡೆದರು.
ಎಂಟು ಮಂದಿಯಿದ್ದ ಕಣದಲ್ಲಿ, 27 ವರ್ಷ ವಯಸ್ಸಿನ ಚೋಪ್ರಾ ತಮ್ಮ ಮೊದಲ ಯತ್ನದಲ್ಲೇ ಭರ್ಚಿಯನ್ನು 88.16 ಮೀ. ದೂರ ಎಸೆದರು. ಅವರ ಎರಡನೇ ಥ್ರೋ 85.10 ಮೀ. ಎಂದು ದಾಖಲಾಯಿತು. ನಂತರದ ಮೂರು ಯತ್ನಗಳು ಫೌಲ್ ಆದವು. ಆರನೇ ಹಾಗೂ ಕೊನೆಯ ಯತ್ನದಲ್ಲಿ ಅವರು 82.89 ಮೀ. ದೂರ ಎಸೆದರು.
ಈ ಹಿಂದೆ ವಿವಿಧ ಕೂಟಗಳಲ್ಲಿ 90 ಮೀ. ಗಿಂತ ದೂರ ದಾಖಲಿಸಿದ ಐವರು ಇಲ್ಲಿ ಕಣದಲ್ಲಿದ್ದರೂ ಯಾರೂ ಚೋಪ್ರಾ ಅವರ ಮೊದಲ ಯತ್ನ (88.16 ಮೀ.) ದಾಟಲಿಲ್ಲ. ವೆಬರ್ ತಮ್ಮ ಮೊದಲ ಯತ್ನದಲ್ಲಿ 87.88 ಮೀ. ದೂರ ಎಸೆದಿದ್ದು ಅದೇ ಅವರ ಉತ್ತಮ ಪ್ರದರ್ಶನ ಎನಿಸಿತು. ಬ್ರೆಜಿಲ್‌ನ ಲೂಯಿಸ್ ಮೌರಿಸಿಯೊ ಡ ಸಿಲ್ವ ಮೂರನೇ ಯತ್ನದಲ್ಲಿ 86.62 ಮೀ. ಎಸೆದು ಮೂರನೇ ಸ್ಥಾನ ಗಳಿಸಿದರು.
‘ನನ್ನ ಥ್ರೊ ಬಗ್ಗೆ ಸಮಾಧಾನವಿದೆ. ನನ್ನ ರನ್‌ಅಪ್ ಇಂದು ವೇಗವಾಗಿತ್ತು. ಫಲಿತಾಂಶ ಮತ್ತು ಮೊದಲ ಸ್ಥಾನ ಪಡೆದಿದದ್ದಕ್ಕೆ ಸಂಸತವಾಗಿದೆ’ ಎಂದು ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಹರಿಯಾಣದ ಅಥ್ಲೀಟ್ ಹೇಳಿದರು.
ಇದಕ್ಕಿಂತ ಮೊದಲು, ಸ್ವಿಜರ್ಲೆಂಡ್‌ನ ಲೂಸಾನ್‌ನಲ್ಲಿ ಚೋಪ್ರಾ (2023ರ ಜೂನ್‌ನಲ್ಲಿ) ಕೊನೆಯ ಬಾರಿ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದರ ನಂತರ ಅವರು ಆರು ಡೈಮಂಡ್ ಲೀಗ್ ಕೂಟಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು.
ಪ್ರತಿಷ್ಠಿತ ಪ್ಯಾರಿಸ್ ಲೆಗ್‌ನಲ್ಲಿ ಇದು ಅವರಿಗೆ ಮೊದಲ ಗೆಲುವು. 2017ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿದ್ದ ವೇಳೆ ಅವರು ಈ ಕೂಟದಲ್ಲಿ ಸ್ಪರ್ಧಿಸಿದ್ದು ಐದನೇ ಸ್ಥಾನ (84.67 ಮೀ.) ಗಳಿಸಿದ್ದರು.
‘ಮೂರು ದಿನಗಳ ನಂತರ, ಇದೇ 24ರಂದು ಒಸ್ಟ್ರಾವದಲ್ಲಿ (ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ ಕೂಟ) ಸ್ಪರ್ಧಿಸಲಿದ್ದೇನೆ’ ಎಂದು ಅವರು ಮುಂದಿನ ಕೂಟದ ಬಗ್ಗೆ ತಿಳಿಸಿದರು. ಬೆಂಗಳೂರಿನಲ್ಲಿ ಜುಲೈ 5ರಂದು ನಡೆಯುವ ತಮ್ಮದೇ ಆಯೋಜನೆಯಲ್ಲಿ ನಡೆಯಲಿರುವ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲೂ ಕಣಕ್ಕಿಳಿಯಲಿದ್ದಾರೆ. ಈ ಕೂಟವನ್ನು ವಿಶ್ವ ಅಥ್ಲೆಟಿಕ್ಸ್, ಕೆಟಗರಿ ‘ಎ’ ಸ್ಪರ್ಧೆ ಎಂದು ಗುರುತಿಸಿದೆ.
ಮೇ 16ರಂದು ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ಮೊದಲ ಬಾರಿ 90 ಮೀ. ಗಡಿ ದಾಟಿ 90.23 ಮೀ. ಎಸೆದಿದ್ದರು. ಆದರೆ ಅಲ್ಲಿ ವೆಬರ್ (91.06) ಅವರ ನಂತರ ಎರಡನೇ ಸ್ಥಾನ ಗಳಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.