ADVERTISEMENT

ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತ ಮಹಿಳಾ ಜೂ. ತಂಡಕ್ಕೆ ಸ್ವರ್ಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 15:42 IST
Last Updated 26 ಅಕ್ಟೋಬರ್ 2023, 15:42 IST
<div class="paragraphs"><p>ಪ್ರಜಾವಾಣಿ ಸಂಗ್ರಹ ಚಿತ್ರ</p></div>

ಪ್ರಜಾವಾಣಿ ಸಂಗ್ರಹ ಚಿತ್ರ

   

ನವದೆಹಲಿ: ಸೋನಮ್ ಉತ್ತಮ್, ಗೌತಮಿ ಭಾನೋತ್ ಮತ್ತು ಜಾಸ್ಮಿನ್ ಕೌರ್ ಅವರನ್ನೊಳಗೊಂಡ ಭಾರತದ 10 ಮೀ. ಏರ್‌ ರೈಫಲ್ ಜೂನಿಯರ್ ತಂಡ, ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕೂಟ ದಾಖಲೆಯೊಡನೆ ಚಿನ್ನದ ಪದಕ ಗೆದ್ದುಕೊಂಡಿತು.

ತಂಡ 1891.6 ಪಾಯಿಂಟ್ಸ್‌ ಕಲೆಹಾಕಿತು. ಈ ಹಿಂದಿನ ದಾಖಲೆಯನ್ನು (1883.3) ಮೆಹುಲಿ ಘೋಷ್, ಇಳವನಿಲ್ ವಳರಿವನ್ ಮತ್ತು ಶ್ರೇಯಾ ಅಗರವಾಲ್ ಅವರಿದ್ದ ತಂಡ 2019ರಲ್ಲಿ ಸ್ಥಾಪಿಸಿತ್ತು. ಗೌತಮಿ 251.3 ಪಾಯಿಂಟ್‌ಗಳೊಡನೆ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ADVERTISEMENT

10 ಮೀ. ಏರ್‌ ರೈಫಲ್ ಯುವ ವಿಭಾಗದಲ್ಲಿ ಅಭಿನವ್ ಚೌಧರಿ 241.8 ಪಾಯಿಂಟ್ಸ್‌ ಕಲೆಹಾಕಿ ಸ್ವರ್ಣಪದಕ ಗೆದ್ದುಕೊಂಡರು.

ಅನರ್ಹ: ಪುರುಷರ ಜೂನಿಯರ್ 10 ಮೀ. ಏರ್‌ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಅನರ್ಹಗೊಳಿಸಲಾಯಿತು. ತಂಡದ ಸದಸ್ಯರಲ್ಲಿ ಒಬ್ಬರಾದ ಧನುಶ್ ಶ್ರೀಕಾಂತ್ ಅವರು ಧರಿಸಿದ ಟ್ರೌಸರ್ ಐಎಸ್‌ಎಸ್‌ಎಫ್‌ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬುದು ಇದಕ್ಕೆ ಕಾರಣ. ಧನುಷ್, ಅಭಿನವ್ ಶಾ, ಉಮಾಮಹೇಶ್ ಮದ್ದಿನೇನಿ ಅವರಿದ್ದ ತಂಡ ಚಿನ್ನ ಗೆಲ್ಲುವ ಮತ್ತು ಏಷ್ಯನ್ ಜೂನಿಯರ್ ದಾಖಲೆ ಸ್ಥಾಪಿಸುವ ಹಾದಿಯಲ್ಲಿದ್ದಾಗ ತಂಡಕ್ಕೆ ನಿರಾಸೆಯ ಸುದ್ದಿ ಎರಗಿತು.

10 ಮೀ. ಏರ್‌ ಪಿಸ್ತೂಲ್ ಮಹಿಳೆಯರ ಯುವ ಫೈನಲ್‌ನಲ್ಲಿ ಉರ್ವಾ ಚೌಧರಿ (218.5 ಅಂಕ) ಕಂಚಿನ ಪದಕ ಪಡೆದರು. ಪುರುಷರ ವಿಭಾಗದ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರವೀಂದರ್ ಸಿಂಗ್ (556) ಬೆಳ್ಳಿಯ ಪದಕ ಗೆದ್ದುಕೊಂಡರು. ರವೀಂದರ್, ಅನಿಕೇತ್ ವಿನಾಯಕ್, ರಾಮ್‌ ಬಾಬು ಅವರಿದ್ದ ತಂಡ ಒಟ್ಟು 1620 ಪಾಯಿಂಟ್ಸ್ ಸಂಗ್ರಹಿಸಿ ಕಂಚಿನ ಪದಕ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.