ADVERTISEMENT

ಜೂನಿಯರ್ ಮಹಿಳಾ ಹಾಕಿ ತಂಡ ಅರ್ಜೆಂಟೀನಾಕ್ಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 12:14 IST
Last Updated 21 ಮೇ 2025, 12:14 IST
ಹಾಕಿ
ಹಾಕಿ   

ಬೆಂಗಳೂರು: ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಆಡಲು ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ಬುಧವಾರ ಅರ್ಜೆಂಟೀನಾದ ರೊಸಾರಿಯೊಗೆ ನಿರ್ಗಮಿಸಿತು. ಈ ಟೂರ್ನಿ ಮೇ 25 ರಿಂದ ಜೂನ್‌ 2ರವರೆಗೆ ನಡೆಯಲಿದೆ.

ಚಿಲಿಯಲ್ಲಿ ನಡೆಯಲಿರುವ ಎಫ್‌ಐಎಚ್‌ ಹಾಕಿ ಜೂನಿಯರ್ ಮಹಿಳಾ ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ಈ ಸ್ನೇಹಪರ ಟೂರ್ನಿಯನ್ನು ಏರ್ಪಡಿಸಲಾಗಿದೆ. ಭಾರತ, ಆತಿಥೇಯ ಅರ್ಜೆಂಟೀನಾದ ಜೊತೆ ಉರುಗ್ವೆ ಮತ್ತು ಚಿಲಿ ತಂಡಗಳೂ ಕಣದಲ್ಲಿ ನಾಲ್ಕು ರಾಷ್ಟ್ರಗಳ ಟೂರ್ನಿಯ ಕಣದಲ್ಲಿವೆ.

ಭಾರತ ತಂಡವೂ ಇತರ ಮೂರು ತಂಡಗಳ ಜೊತೆ ತಲಾ ಎರಡು ಪಂಧ್ಯಗಳನ್ನು ಆಡಲಿದೆ. ಈ ಟೂರ್ನಿಯು ತಂಡಕ್ಕೆ ತನ್ನ ಸಾಮರ್ಥ್ಯದ ಮೌಲ್ಯಮಾಪ ಮಾಡಲು, ಸಂಯೋಜನೆಗಳನ್ನು ಪರೀಕ್ಷಿಸಲು ಮತ್ತು ತಂತ್ರಗಳನ್ನು ಮರುರೂಪಿಸಲು ನೆರವಾಗಲಿದೆ. ಜೂನಿಯರ್ ವಿಶ್ವಕಪ್‌ ಡಿಸೆಂಬರ್‌ನಲ್ಲಿ ನಡೆಯಲಿದೆ.

ADVERTISEMENT

ತುಷಾರ್ ಖಾಂಡೇಕರ್ ಅವರು ತರಬೇತಿದಾರರಾಗಿರುವ ತಂಡದ ನೇತೃತ್ವವನ್ನು ಗೋಲ್‌ಕೀಪರ್‌ ನಿಧಿ ಮುನ್ನಡೆಸುತ್ತಿದ್ದಾರೆ. ಫಾರ್ವರ್ಡ್ ಆಟಗಾರ್ತಿ ಹೀನಾ ಬಾನೊ ಅವರು ಉಪನಾಯಕಿ ಆಗಿದ್ದಾರೆ.

ಭಾರತ ತನ್ನ ಮೊದಲ ಪಂದ್ಯವನ್ನು ಮೇ 25ರಂದು ಚಿಲಿ ವಿರುದ್ಧ ಆಡಲಿದೆ. 26ರಂದು ಉರುಗ್ವೆ ಮತ್ತು 28ರಂದು ಅರ್ಜೆಂಟೀನಾ ವಿರುದ್ಧ ಆಡಲಿದೆ.

‘ಅರ್ಜೆಂಟೀನಾದಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಲು ತಂಡವು ಕಾತರದಲ್ಲಿದೆ. ತರಬೇತಿ ವೇಳೆ ನಾವು ಪರಿಶ್ರಮ ಹಾಕಿದ್ದು, ಅದು ಪಂದ್ಯಗಳ ವೇಳೆ ಪ್ರತಿಫಲನಗೊಳ್ಳಲಿದೆ’ ಎಂದು ನಿಧಿ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಬಲ ತಂಡಗಳ ಎದುರು ಆಡುವುದರಿಂಧ ನಾವು ಆಟ ಸುಧಾರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.