ADVERTISEMENT

Asian Games | Hockey: ದ.ಕೊರಿಯಾ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2023, 9:51 IST
Last Updated 4 ಅಕ್ಟೋಬರ್ 2023, 9:51 IST
   

ಹಾಂಗ್‌ಝೌ: ಭಾರತದ ಪುರುಷರ ಹಾಕಿ ತಂಡವು ಏಷ್ಯನ್‌ ಕ್ರೀಡಾಕೂಟದಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದು, ಬುಧವಾರ  ಸೆಮಿಫೈನಲ್‌ನಲ್ಲಿ 5–3 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. 

2014ರ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಭಾರತ‌ ತಂಡ, ಕಳೆದ ಆವೃತ್ತಿಯಲ್ಲಿ ಕಂಚು ಜಯಿಸಿತ್ತು. ಈ ಬಾರಿ ಫೈನಲ್‌ ಪ್ರವೇಶಿಸಿರುವುದರಿಂದ ಚಿನ್ನ ಅಥವಾ ಬೆಳ್ಳಿ ಪದಕ ಖಚಿತಗೊಂಡಿದೆ. ಶುಕ್ರವಾರ ಫೈನಲ್‌ನಲ್ಲಿ ಜಪಾನ್‌ ಜತೆ ಮುಖಾಮುಖಿಯಾಗಲಿದ್ದು, ಭಾರತ ಚಿನ್ನ ಗೆದ್ದರೆ ಪ್ಯಾರಿಸ್‌ ಒಲಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲಿದೆ.

ಭಾರತದ ಪರ ಹಾರ್ದಿಕ್ ಸಿಂಗ್ (5ನೇ ನಿಮಿಷ), ಮನದೀಪ್ ಸಿಂಗ್ (11ನೇ), ಲಲಿತ್ ಕುಮಾರ್ ಉಪಾಧ್ಯಾಯ (15ನೇ), ಅಮಿತ್ ರೋಹಿದಾಸ್ (24ನೇ) ಮತ್ತು ಅಭಿಷೇಕ್ (54ನೇ ನಿ) ತಲಾ ಒಂದು ಗೋಲು ತಂದಿತ್ತರು. ಕೊರಿಯಾ ಪರ ಮಂಜೇ ಜಂಗ್ (17, 20, 42ನೇ) ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದರು.

ADVERTISEMENT

5ನೇ ನಿಮಿಷದಲ್ಲಿ ಲಲಿತ್, ಗೋಲು ಹೊಡೆಯಲು ಯತ್ನಿಸಿದಾಗ ಕೊರಿಯಾದ ಗೋಲ್‌ಕೀಪರ್ ಜೇಹಿಯೋನ್ ಕಿಮ್ ತಡೆದರು. ಈ ವೇಳೆ ಮರುಬೌಂಡ್ಸ್‌ ಆದ ಚೆಂಡನ್ನು ಹಾರ್ದಿಕ್ ಗುರಿ ಸೇರಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ಮೊದಲ ಕ್ವಾರ್ಟರ್‌ನಲ್ಲೇ 3-0 ಮುನ್ನಡೆ ಸಾಧಿಸಿದ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ, ದೊಡ್ಡ ಅಂತರದ ಗೆಲುವು ದಾಖಲಿಸುವ ಮುನ್ಸೂಚನೆ ನೀಡಿತ್ತು. ಆದರೆ, ನಂತರ ಚುರುಕಿನ ಆಟವಾಡಿದ ಎದುರಾಳಿ ತಂಡದವರು ಪ್ರಬಲ ಸ್ಪರ್ಧೆ ನೀಡಿದರು.

ಎರಡನೇ ಕ್ವಾರ್ಟರ್‌ನಲ್ಲಿ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸುವ ಅಂತರವನ್ನು 3–2ಕ್ಕೆ ತಗ್ಗಿಸಿದರು. ಆದರೆ, ನಂತರದ ನಾಲ್ಕೇ ನಿಮಿಷದಲ್ಲಿ ಅಮಿತ್‌ ಚೆಂಡನ್ನು ಗುರಿ ಸೇರಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಜಪಾನ್‌ ತಂಡವು 3–2ರಿಂದ ಚೀನಾವನ್ನು ಮಣಿಸಿ ಫೈನಲ್‌ ಪ್ರವೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.