ADVERTISEMENT

ಹಾಕಿ: ಸ್ಪೇನ್‌ಗೆ ಮಣಿದ ಭಾರತ ತಂಡಗಳು

ಐದು ರಾಷ್ಟ್ರಗಳ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 16:08 IST
Last Updated 15 ಡಿಸೆಂಬರ್ 2023, 16:08 IST
<div class="paragraphs"><p>ಹಾಕಿ</p></div>

ಹಾಕಿ

   

ವಲೆನ್ಶಿಯಾ (ಸ್ಪೇನ್‌),: ಭಾರತ ಪುರುಷರ ಹಾಕಿ ತಂಡ ತನಗಿಂತ ಕೆಳಕ್ರಮಾಂಕದ ಸ್ಪೇನ್‌ ಎದುರು 0–1 ಗೋಲಿನಿಂದ ಸೋತು ಐದು ರಾಷ್ಟ್ರಗಳ ಹಾಕಿ ಟೂರ್ನಿಯನ್ನು ಶುಕ್ರವಾರ ನಿರಾಶಾದಾಯಕ ರೀತಿಯಲ್ಲಿ ಆರಂಭಿಸಿತು. ಮಹಿಳೆಯರ ವಿಭಾಗದಲ್ಲೂ ಭಾರತ, ಇದೇ ಎದುರಾಳಿಗೆ 2–3 ಗೋಲುಗಳಿಂದ ಮಣಿಯಿತು.

ಆತಿಥೇಯ ತಂಡದ ಆಲ್ವಾರೊ ಇಗ್ಲೇಷಿಯಸ್ ಪಂದ್ಯದ ಏಕೈಕ ಗೋಲನ್ನು 29ನೇ ನಿಮಿಷ ಗಳಿಸಿದರು. ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ವಿಶ್ವಕ್ರಮಾಂಕದಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಸ್ಪೇನ್ ಎಂಟನೇ ಸ್ಥಾನದಲ್ಲಿದೆ.

ADVERTISEMENT

ಈ ಪಂದ್ಯಕ್ಕೆ ಮೊದಲು ಈ ವರ್ಷ ಎರಡು ಬಾರಿ ಭಾರತ– ಸ್ಪೇನ್ ಎದುರಾಳಿಗಳಾಗಿದ್ದು, ಮಿಶ್ರಫಲ ಉಂಡಿವೆ. ಭಾರತ ಜನವರಿಯಲ್ಲಿ ನಡೆದ ವಿಶ್ವ ಕಪ್‌ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿತ್ತು. ಆದರೆ ಜುಲೈನಲ್ಲಿ ಸ್ಪೇನ್‌ ತಂಡ ತವರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಮೇಲೆ ಜಯಗಳಿಸಿತ್ತು.

ಭಾರತ ತನ್ನ ಮುಂದಿನ ಪಂದ್ಯವನ್ನು ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ಎದುರು ಶನಿವಾರ ಆಡಲಿದೆ. ಐದು ತಂಡಗಳು ಪರಸ್ಪರರನ್ನು ಎದುರಿಸಲಿದ್ದು, ಅತ್ಯಧಿಕ ಪಾಯಿಂಟ್ಸ್ ಗಳಿಸಿದ ತಂಡ ಟೂರ್ನಿಯ ವಿಜೇತ ಎನಿಸಲಿದೆ.

ವನಿತೆಯರ ತಂಡಕ್ಕೂ ಸೋಲು:

ಭಾರತ ಮಹಿಳಾ ತಂಡ, ಐದು ರಾಷ್ಟ್ರಗಳ ಹಾಕಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ 2–3 ಗೋಲುಗಳಿಂದ ಸ್ಪೇನ್ ತಂಡದ ಎದುರು ಸೋಲನುಭವಿಸಿತು.

ಗುರ್ಜಿತ್ ಕೌರ್ (13ನೇ ನಿಮಿಷ), ಸಂಗೀತಾ ಕುಮಾರಿ (14ನೇ ನಿಮಿಷ) ಭಾರತ ತಂಡದ ಪರ ಗೋಲು ಗಳಿಸಿದರೆ, ಸಾರಾ ಬೊರಿಯೊಸ್ (2ನೇ ನಿಮಿಷ), ಪೆಟ್ರೀಷಿಯಾ ಆಲ್ವಾರೆಝ್ ನಾರ್ಡಿಝ್ (30ನೇ ನಿಮಿಷ) ಮತ್ತು ಜೂಲಿಯಾ ಗರೆಟಾ (53ನೇ ನಿಮಿಷ) ಸ್ಪೇನ್ ಪರ ಗೋಲುಗಳನ್ನು ತಂದಿತ್ತರು.

ಭಾರತ ತಂಡ, ತನ್ನ ಮುಂದಿನ ಪಂದ್ಯವನ್ನು ಶನಿವಾರ ಬೆಲ್ಜಿಯಂ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.