ADVERTISEMENT

ಒಲಿಂಪಿಕ್ಸ್‌ ಹಾಕಿ ಅರ್ಹತಾ ಸುತ್ತಿನ ಹಣಾಹಣಿ: ಭಾರತ ತಂಡಗಳಿಗೆ ಟೋಕಿಯೊ ಟಿಕೆಟ್

ಮಿಂಚಿದ ಆಕಾಶ್ ದೀಪ್‌ ಸಿಂಗ್‌, ಲಲಿತ್‌, ರಾಣಿ ರಾಂಪಾಲ್

ಪಿಟಿಐ
Published 2 ನವೆಂಬರ್ 2019, 19:45 IST
Last Updated 2 ನವೆಂಬರ್ 2019, 19:45 IST
ಶನಿವಾರ ಪಂದ್ಯ ಗೆದ್ದ ನಂತರ ಭಾರತ ತಂಡದ ಆಟಗಾರರು ಪ್ರೇಕ್ಷಕರತ್ತ ಕೈ ಬೀಸಿ ಸಂಭ್ರಮಿಸಿದರು –ಪಿಟಿಐ ಚಿತ್ರ
ಶನಿವಾರ ಪಂದ್ಯ ಗೆದ್ದ ನಂತರ ಭಾರತ ತಂಡದ ಆಟಗಾರರು ಪ್ರೇಕ್ಷಕರತ್ತ ಕೈ ಬೀಸಿ ಸಂಭ್ರಮಿಸಿದರು –ಪಿಟಿಐ ಚಿತ್ರ   

ಭುವನೇಶ್ವರ: ಆತಂಕದ ಕ್ಷಣಗಳಲ್ಲಿ ಎದೆಗುಂದದೆ ಛಲದಿಂದ ಮುನ್ನಡೆದ ಭಾರತದ ಪುರುಷರ ಮತ್ತು ಮಹಿಳೆಯರ ತಂಡದವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಗಳಿಸಿಕೊಂಡರು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎರಡು ಲೆಗ್‌ಗಳ ಹಣಾಹಣಿಯಲ್ಲಿ ಪುರುಷರ ತಂಡ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಮಹಿಳಾ ತಂಡ ಶನಿವಾರ ಸೋತರೂ ಗೋಲು ಸರಾಸರಿಯಲ್ಲಿ ಮುನ್ನಡೆ ಸಾಧಿಸಿತು.

ಪುರುಷರ ಪಂದ್ಯದ 22ನೇ ಸೆಕೆಂಡಿನಲ್ಲೇ ಅಲೆಕ್ಸಿ ಸೊಬೊಲೊವ್‌ಸ್ಕಿ ಗಳಿಸಿದ ಗೋಲಿನ ಮೂಲಕ ಭಾರತಕ್ಕೆ ರಷ್ಯಾ ಪೆಟ್ಟು ನೀಡಿತು. ಒತ್ತಡಕ್ಕೆ ಒಳಗಾದ ಭಾರತ ನಂತರ ಅಮೋಘ ಆಟವಾಡಿ 7–1ರಿಂದ ಜಯ ಗಳಿಸಿತು.

ADVERTISEMENT

17ನೇ ನಿಮಿಷದಲ್ಲಿ ಲಲಿತ್‌, 23 ಮತ್ತು 29ನೇ ನಿಮಿಷಗಳಲ್ಲಿ ಆಕಾಶ್‌ ದೀಪ್‌, 47ನೇ ನಿಮಿಷದಲ್ಲಿ ನೀಲಕಂಠ ಮತ್ತು 48, 58ನೇ ನಿಮಿಷಗಳಲ್ಲಿ ರೂಪಿಂದರ್ ಪಾಲ್ ಸಿಂಗ್, 59ನೇ ನಿಮಿಷದಲ್ಲಿ ಮನ್‌ಪ್ರೀತ್‌ ಸಿಂಗ್ ಚೆಂಡನ್ನು ಗುರಿ ಸೇರಿಸಿದರು. ಈ ಮೂಲಕ ಒಟ್ಟಾರೆ 11–3 ಗೋಲುಗಳ ಮುನ್ನಡೆ ಸಾಧಿಸಿತು.

ಮಹಿಳೆಯರ ವಿಭಾಗದಲ್ಲಿ ಶುಕ್ರ ವಾರ ಮೊದಲ ಪಂದ್ಯದಲ್ಲಿ ಭಾರತ 5–1ರಿಂದ ಜಯ ಸಾಧಿಸಿತ್ತು. ಶನಿವಾರ 1–4ರಲ್ಲಿ ಸೋತಿತು. ಹೀಗಾಗಿ ಒಟ್ಟಾರೆ 6–5 ಗೋಲುಗಳ ಮುನ್ನಡೆ ಗಳಿಸಿತು.

ಒಲಿಂಪಿಕ್ಸ್‌ಗೆ ಟಿಕೆಟ್ ಗಳಿಸಬೇ ಕಾದರೆ ಶನಿವಾರ ಭರ್ಜರಿ ಜಯದ ಅಗತ್ಯವಿದ್ದ ಅಮೆರಿಕ ತಂಡದವರು ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಆತಿಥೇಯರನ್ನು ಕಂಗೆಡಿಸಿದರು. 2ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶವನ್ನೂ 4ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನೂ ಪಡೆಯಿತು. ಮೊದಲಾರ್ಧ ಮುಗಿದಾಗ ತಂಡದ ಖಾತೆಗೆ 4 ಗೋಲುಗಳು ಸೇರಿದವು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ನಾಯಕಿ ರಾಣಿ ರಾಂಪಾಲ್ ಗೋಲು ಗಳಿಸಿ ಭಾರತದ ಕನಸನ್ನು ನನಸು ಮಾಡಿದರು.

ಮೊದಲ 5 ನಿಮಿಷಗಳ ಒಳಗೆ ಅಮೆರಿಕಕ್ಕೆ 3 ಪೆನಾಲ್ಟಿ ಅವಕಾಶಗಳು ಲಭಿಸಿದವು. ಈ ಪೈಕಿ ಮೊದಲ ಎರಡು ಅವಕಾಶಗಳಲ್ಲಿ ವಿಫಲವಾದ ಅಮೆರಿಕ 3ನೇ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿತು. ಅಮಾಂಡ ಮಗಡಾನ್ ಖಾತೆಗೆ ಈ ಗೋಲು ಸೇರಿತು.

ಭಾರತದ ಆಟಗಾರ್ತಿಯರು 7ನೇ ನಿಮಿಷದಲ್ಲಿ ಮೊದಲ ಬಾರಿ ಎದುರಾಳಿ ಆವರಣಕ್ಕೆ ನುಗ್ಗಿದರು. ಆದರೆ ಮರುಕ್ಷಣದಲ್ಲೇ ತಿರುಗೇಟು ನೀಡಿದ ಅಮೆರಿಕ ಪ್ರಬಲ ಆಕ್ರಮಣದ ಮೂಲಕ ಭಾರತದ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ 1 ನಿಮಿಷ ಬಾಕಿ ಇದ್ದಾಗ ಅಮೆರಿಕದ ನಾಯಕಿ ಕ್ಯಾಥಲೀನ್ ಶಾರ್ಕಿ ಅದ್ಭುತ ಕೈಚಳಕ ತೋರಿ ಗೋಲು ದಾಖಲಿಸಿದರು. ಎರಡನೇ ಕ್ವಾರ್ಟರ್‌ನಲ್ಲೂ ಭಾರತಕ್ಕೆ ಲಯ ಕಂಡುಕೊಳ್ಳಲು ಆಗಲಿಲ್ಲ. 20ನೇ ನಿಮಿಷದಲ್ಲಿ ಅಲಿಸಾ ಪಾರ್ಕರ್ ಗಳಿಸಿದ ಗೋಲಿನ ಮೂಲಕ ಅಮೆರಿಕದ ಮುನ್ನಡೆ ಮತ್ತಷ್ಟು ಹೆಚ್ಚಿತು. 28ನೇ ನಿಮಿಷದಲ್ಲಿ ಅಮಾಂಡ ಅವರ ಗೋಲಿನ ಮೂಲಕ ಅಮೆರಿಕ ಒಟ್ಟಾರೆ 5–5ರ ಸಮಬಲ ಸಾಧಿಸಿತು.

ಛಲ ಬಿಡದ ಹೋರಾಟ: ಮೊದಲಾರ್ಧದಲ್ಲಿ ಎದುರಾಳಿಗಳ ವಿರುದ್ಧ ಸಂಪೂರ್ಣ ನಿರುತ್ತರರಾದ ಭಾರತ ತಂಡದಲ್ಲಿ ದ್ವಿತೀಯಾರ್ಧದ ಆರಂಭದಲ್ಲಿ 10 ಮಂದಿ ಮಾತ್ರ ಇದ್ದರು. ಮೊದಲಾರ್ಧದ ಕೊನೆಯಲ್ಲಿ ನವನೀತ್ ಕೌರ್‌ ಹಳದಿ ಕಾರ್ಡ್‌ ಪಡೆದು ಹೊರ ನಡೆದಿದ್ದರು.

ಆದರೂ ಎದುರಾಳಿಗಳ ಆಕ್ರಮಣವನ್ನು ದಿಟ್ಟವಾಗಿ ಎದುರಿಸಿ ರಾಂಪಾಲ್ ಬಳಗ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

40 ಮತ್ತು 43ನೇ ನಿಮಿಷಗಳಲ್ಲಿ ಲಭಿಸಿದ ಎರಡು ಪೆನಾಲ್ಟಿಗಳನ್ನು ಕೈಚೆಲ್ಲಿದ ಭಾರತದ ಆಟಗಾರ್ತಿಯರು ಕೊನೆಯ ಕ್ವಾರ್ಟರ್‌ನಲ್ಲಿ ಒತ್ತಡದಲ್ಲೇ ಕಣಕ್ಕೆ ಇಳಿದಿದ್ದರು. ಆದರೆ ಐದೇ ನಿಮಿಷಗಳಲ್ಲಿ ಸಂಭ್ರಮದಿಂದ ಕುಣಿದಾಡಿದರು. ಅಲಿಸಾ ಮ್ಯಾನ್ಲಿ ಹಳದಿ ಕಾರ್ಡ್ ಪಡೆದು ಹೊರನಡೆದ ಬೆನ್ನಲ್ಲೇ ರಾಣಿ ರಾಂಪಾಲ್ ಮೋಹಕ ಗೋಲು ಗಳಿಸಿದರು. ಕೊನೆಯ ಹಂತದಲ್ಲಿ ಅಮೆರಿಕದ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಭಾರತದ ಡಿಫೆಂಡರ್‌ಗಳು ಯಶಸ್ವಿಯಾದರು.

ತಂಡಗಳಿಗೆ ಸಾಧ್ಯತೆ ಏನೇನಿದ್ದವು?
ಮೊದಲ ಲೆಗ್‌ನಲ್ಲಿ ಅಮೆರಿಕ ಮಹಿಳೆಯರು 1–5ರಿಂದ ಸೋತಿದ್ದ ಕಾರಣ ಶನಿವಾರ 5 ಗೋಲುಗಳ ಅಂತರದಿಂದ ಜಯ ಸಾಧಿಸಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದಾಗಿತ್ತು. 4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದರೆ ಹಣಾಹಣಿ ಟೈ ಆಗುತ್ತಿತ್ತು. ಆಗ, ಒಲಿಂಪಿಕ್ಸ್ ಅರ್ಹತೆ ಗಳಿಸುವ ತಂಡವನ್ನು ಶೂಟ್ ಔಟ್ ಮೂಲಕ ನಿರ್ಣಯಿ ಸಬೇಕಾಗುತ್ತಿತ್ತು. ಮೂರು ಕ್ವಾರ್ಟರ್‌ಗಳ ವರೆಗೂ ಕನಸು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಿದ್ದ ಅಮೆರಿಕಕ್ಕೆ ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಆಘಾತ ನೀಡಿತು. ಪುರುಷರ ವಿಭಾಗದ ಮೊದಲ ಲೆಗ್‌ನಲ್ಲಿ ಭಾರತ 4–2ರಲ್ಲಿ ಜಯ ಗಳಿಸಿದ್ದರಿಂದ ಶನಿವಾರ ಕೇವಲ ಡ್ರಾ ಸಾಧಿಸಿದ್ದರೂ ಅರ್ಹತೆ ಗಳಿಸ
ಬಹುದಿತ್ತು. ಆದರೆ ತಂಡ ಭರ್ಜರಿ ಜಯ ಗಳಿಸಿತು.

ಭಾರತ ಮಹಿಳಾ ತಂಡದವರ ಸಂಭ್ರಮ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.