ನವದೆಹಲಿ: ‘ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ದೇಶವನ್ನು ಪ್ರತಿನಿಧಿಸಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ನಾವು ಮರೆಯುತ್ತೇವೆ. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ಅಂತಹ ಕ್ರೀಡಾಪಟುಗಳನ್ನು ಸ್ಮರಿಸಿಕೊಳ್ಳುವುದು ಮುಖ್ಯ. ಅದು ನಮ್ಮ ಜವಾಬ್ದಾರಿ ಕೂಡ’ ಎಂದು ಭಾರತದ ಒಲಿಂಪಿಯನ್ ಸಂಸ್ಥೆಯ (ಒಎಐ) ಅಧ್ಯಕ್ಷ ಶಿವ ಕೇಶವನ್ ಹೇಳಿದ್ದಾರೆ.
70ನೇ ವಿಶ್ವ ಒಲಿಂಪಿಕ್ ವರ್ಷಾಚರಣೆಯ ಅಂಗವಾಗಿ ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಹಿಂದಿನ ಒಲಿಂಪಿಕ್ಸ್‌ಗಳಲ್ಲಿಅಮೋಘ ಸಾಮರ್ಥ್ಯ ತೋರಿದ ಕ್ರೀಡಾಪಟುಗಳ ಅನುಭವ ಕೂಡ ನಮಗೆ ಮುಖ್ಯ. ಈ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡಲು ಇಚ್ಚಿಸುತ್ತದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ’ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲವ್ ಶ್ರಾಫ್, ‘ಇಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಮತ್ತು ಭಾರತದ ಕ್ರೀಡಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರನ್ನು ದುಡಿಸಿಕೊಳ್ಳುವ ಅಗತ್ಯವಿದೆ. ಹಾಗಾಗಿ, ರಾಷ್ಟ್ರದಾದ್ಯಂತ ಕ್ರೀಡಾ ಶಿಕ್ಷಣ ಕುರಿತಾದ ಐದು ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ’ ಎಂದು ಹೇಳಿದ್ದಾರೆ.
70ನೇ ವಿಶ್ವ ಒಲಿಂಪಿಕ್ ವರ್ಷಾಚರಣೆಯ ಪ್ರಯುಕ್ತ ಭಾರತದ ಒಲಿಂಪಿಯನ್ ಸಂಸ್ಥೆಯು ‘ಒಲಿಂಪಿಸಂ–ಅರೌಂಡ್ ಅಸ್, ಅಬೊಟ್ ಅಸ್, ವಿತಿನ್ ಅಸ್’ ಎಂಬ ಹೆಸರಿನ ವಿಡಿಯೊವೊಂದನ್ನು ಬಿಡುಗಡೆ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.