ಶೂಟಿಂಗ್
–ಪಿಟಿಐ ಚಿತ್ರ
ಬ್ಯೂನೊ ಏರ್ಸ್: ಭಾರತದ ಲಕ್ಷ್ಯ ಶೆವೊರಾನ್ ಮತ್ತು ನೀರೂ ಧಂಡ ಅವರಿಗೆ ಟ್ರ್ಯಾಪ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಪದಕ ಕೈತಪ್ಪಿತು. ಆದರೆ ಭಾರತ ತಂಡವು, ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಐಎಸ್ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.
ಗುರುವಾರ ನಡೆದ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತದ ಸುರುಚಿ ಮತ್ತು ಸೌರಭ್ ಜೋಡಿ ಕಂಚಿನ ಪದಕ ಗೆದ್ದುಕೊಂಡಿತ್ತು. ರೈಫಲ್, ಪಿಸ್ತೂಲ್, ಶಾಟ್‌ಗನ್ ವಿಭಾಗದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಭಾರತ ತಂಡ ಒಟ್ಟು ಎಂಟು ಪದಕಗಳನ್ನು ಗಳಿಸಿತು. ಇದರಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳು ಒಳಗೊಂಡಿವೆ.
ಚೀನಾ ಐದು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಕೊನೆಯ ದಿನ ನಡೆದ ಮಿಶ್ರ ಪಿಸ್ತೂಲ್ ವಿಭಾಗದಲ್ಲಿ ಚೀನಾದ ಸ್ಪರ್ಧಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. ಅಂತಿಮ ದಿನ ನಿರ್ಧಾರವಾದ ಇನ್ನೊಂದು ಚಿನ್ನದ ಪದಕ (ಮಿಶ್ರ ಟೀಮ್ ಟ್ರ್ಯಾಪ್) ಚೀನಾ ತೈಪಿ ಸ್ಪರ್ಧಿಗಳ ಪಾಲಾಯಿತು.
ಸಿಫ್ತ್ ಕೌರ್ ಸಮ್ರಾ (ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್), ರುದ್ರಾಂಕ್ಷ್ ಪಾಟೀಲ್ (ಪುರುಷರ 10 ಮೀ. ಏರ್ ರೈಫಲ್), ಸುರುಚಿ (ಮಹಿಳೆಯರ 10 ಮೀ. ಏರ್ ಪಿಸ್ತೂಲ್) ಮತ್ತು ವಿಜಯವೀರ್ ಸಿಧು (ಪುರುಷರ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್) ಅವರು ಚಿನ್ನ ಗೆದ್ದ ಭಾರತದ ಸ್ಪರ್ಧಿಗಳು.
ವಿಶ್ವಕಪ್ ರ್‍ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಸ್ಪರ್ಧಿ ಎನ್ನುವ ಹಿರಿಮೆ ಸಿಧು ಅವರದಾಯಿತು.
ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಪ್ಯಾರಿಸ್ ಒಲಿಂಪಿಯನ್ ಇಶಾ ಸಿಂಗ್ ಅವರ ಸಾಧನೆಯೂ ಕಡಿಮೆಯೇನಲ್ಲ. ಇಶಾ ಅವರು ಮಿಶ್ರ ತಂಡ ಸ್ಪರ್ಧೆಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.
1998ರಿಂದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡದ ಅತಿ ಹಿರಿಯ ಸ್ಪರ್ಧಿ ಝೊರಾವರ್ ಸಿಂಗ್ ಸಂಧು ಅವರು ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ತಮ್ಮೆಲ್ಲಾ ಸಾಮರ್ಥ್ಯ ಹಾಕಿದರೂ ಏಳನೇ ಸ್ಥಾನ ಪಡೆಯಬೇಕಾಯಿತು.
ಭಾರತ ತಂಡ ಈಗ ಪೆರುವಿನ ಲಿಮಾಕ್ಕೆ ತೆರಳಲಿದೆ. ಅಲ್ಲಿ ಏಪ್ರಿಲ್ 15ರಂದು ಕಂಬೈನ್ಡ್ ಐಎಸ್‌ಎಸ್‌ಎಫ್ ವಿಶ್ವಕಪ್ ಎರಡನೇ ಲೆಗ್ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.