ಬಾರ್ಸಿಲೋನಾ : ಶಿಸ್ತಿನ ಆಟವಾಡಿದ ಭಾರತ ಮಹಿಳಾ ತಂಡದವರು, ಸ್ಪ್ಯಾನಿಷ್ ಹಾಕಿ ಫೆಡರೇಷನ್‌ನ 100ನೇ ವರ್ಷದ ಅಂಗವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಹಾಕಿ ಟೂರ್ನಿಯನ್ನು ಗೆದ್ದುಕೊಂಡರು.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 3–0 ಗೋಲುಗಳಿಂದ ಆತಿಥೇಯ ಸ್ಪೇನ್ ತಂಡವನ್ನು ಮಣಿಸಿತು. ಈ ಮೂಲಕ ಅಜೇಯ ಸಾಧನೆಯೊಂದಿಗೆ ಚಾಂಪಿಯನ್ ಆಯಿತು.
ವಂದನಾ ಕಟಾರಿಯಾ (22ನೇ ನಿ.), ಮೋನಿಕಾ (48) ಮತ್ತು ಉದಿತಾ (58) ಅವರು ಭಾರತ ತಂಡಕ್ಕೆ ಗೋಲು ತಂದಿತ್ತರು. ಶನಿವಾರ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 3–0 ಯಿಂದ ಮಣಿಸಿದ್ದ ಸವಿತಾ ಬಳಗ, ಭಾನುವಾರವೂ ಶ್ರೇಷ್ಠ ಪ್ರದರ್ಶನ ನೀಡಿತು.
ಎಚ್ಚರಿಕೆಯಿಂದ ಆಟ ಆರಂಭಿಸಿದ ಭಾರತಕ್ಕೆ ಮೊದಲ ಕ್ವಾರ್ಟರ್‌ನಲ್ಲಿ ಯಶಸ್ಸು ದೊರೆಯಲಿಲ್ಲ. ಸ್ಸ್ಪೇನ್ ತಂಡ ನಡೆಸಿದ ಕೆಲವೊಂದು ಪ್ರಯತ್ನಗಳನ್ನು ಗೋಲ್‌ಕೀಪರ್ ಸವಿತಾ, ಸೊಗಸಾಗಿ ತಡೆದರು.
ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ವಂದನಾ ಅವರು ಭಾರತಕ್ಕೆ ಮುನ್ನಡೆ ತಂದಿತ್ತರು. ಲಾಲ್‌ರೆಮ್ಸಿಯಾಮಿ ನೀಡಿದ ಪಾಸ್‌ನಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಗೋಲು ಬರಲಿಲ್ಲ. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಮತ್ತೆರಡು ಗೋಲುಗಳನ್ನು ಗಳಿಸಿದ ಭಾರತ, ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.