ADVERTISEMENT

ಒಲಿಂಪಿಕ್ಸ್‌ ಅರ್ಹತಾ ‘ಫೈನಲ್‌’ಗೆ ಭಾರತ

ಎಫ್‌ಐಎಚ್‌ ಮಹಿಳಾ ಹಾಕಿ ಸರಣಿ: ಇಂದು ಜಪಾನ್‌ ವಿರುದ್ಧ ಅಂತಿಮ ಹಣಾಹಣಿ

ಪಿಟಿಐ
Published 22 ಜೂನ್ 2019, 19:30 IST
Last Updated 22 ಜೂನ್ 2019, 19:30 IST
ಗೋಲು ಗಳಿಸಿದಾಗ ಸಂಭ್ರಮಿಸಿದ ಭಾರತದ ಆಟಗಾರ್ತಿಯರು –ಟ್ವಿಟರ್ ಚಿತ್ರ
ಗೋಲು ಗಳಿಸಿದಾಗ ಸಂಭ್ರಮಿಸಿದ ಭಾರತದ ಆಟಗಾರ್ತಿಯರು –ಟ್ವಿಟರ್ ಚಿತ್ರ   

ಹಿರೋಷಿಮಾ: ‘ಡ್ರ್ಯಾಗ್‌ ಫ್ಲಿಕರ್‌’ ಗುರ್ಜಿತ್‌ ಕೌರ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಫ್‌ಐಎಚ್‌ ಹಾಕಿ ಸರಣಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಶನಿವಾರ ಚಿಲಿ ತಂಡವನ್ನು ಸೋಲಿಸಿತು. ಆ ಮೂಲಕ, ಟೋಕಿಯೊ ಒಲಿಂಪಿಕ್ಸ್‌ ಅಂತಿಮ ಅರ್ಹತಾ ಸುತ್ತಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು.

ಭಾರತ 4–2 ಗೋಲುಗಳಿಂದ ಜಯಗಳಿಸಿತು. ಭಾರತ ಭಾನುವಾರ ನಡೆಯುವ ಫೈನಲ್‌ನಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ. ಈ ಸರಣಿಯಿಂದ ಅಂತಿಮ ಅರ್ಹತಾ ಸುತ್ತಿನಲ್ಲಿ ಎರಡು ತಂಡಗಳಿಗೆ ತೇರ್ಗಡೆಯಾಗುವ ಅವಕಾಶವಿತ್ತು. ವರ್ಷದ ಕೊನೆಯಲ್ಲಿ ಈ ಟೂರ್ನಿ ನಿಗದಿಯಾಗಿದೆ.

ಆತಿಥೇಯ ಜಪಾನ್‌ ಇನ್ನೊಂದು ಸೆಮಿಫೈನಲ್‌ನಲ್ಲಿ ‘ಪೆನಾಲ್ಟಿ ಶೂಟೌಟ್‌’ ನಂತರ3–1 ಗೋಲುಗಳಿಂದ ರಷ್ಯ ತಂಡವನ್ನು ಸೋಲಿಸಿತು. ನಿಗದಿತ 60 ನಿಮಿಷಗಳ ಆಟದ ನಂತರ ಸ್ಕೋರ್‌ 1–1 ರಲ್ಲಿ ಸಮಬಲವಾಗಿತ್ತು.

ADVERTISEMENT

ಭಾರತ ವಿರುದ್ಧ ಮೊದಲ ಸೆಮಿಫೈನಲ್‌ನ ಮೊದಲ ಕ್ವಾರ್ಟರ್‌ ಗೋಲಿಲ್ಲದೇ ಕೊನೆಗೊಂಡಿತು. ಅಚ್ಚರಿಯೆಂಬಂತೆ ಚಿಲಿ 18ನೇ ನಿಮಿಷ ಮುನ್ನಡೆಯಿತು. ಪ್ರತಿದಾಳಿಯೊಂದರಲ್ಲಿ ಒದಗಿದ ಅವಕಾಶದಲ್ಲಿ ಕ್ಯಾರೊಲಿನಾ ಗಾರ್ಸಿಯಾ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಕೊಂಚ ವಿಚಲಿತಗೊಂಡರೂ ಭಾರತ ಪ್ರತಿದಾಳಿ ನಡೆಸಿತು. ನಾಲ್ಕು ನಿಮಿಷಗಳಲ್ಲೇ ‘ಪೆನಾಲ್ಟಿ ಕಾರ್ನರ್‌’ ಅವಕಾಶವೊಂದನ್ನು ಪರಿವರ್ತಿಸಿದ ಗುರ್ಜಿತ್‌ ಕೌರ್‌ ತಂಡ ಗೋಲಿನ ಅಂತರ ಸಮ ಮಾಡಿಕೊಳ್ಳಲು ನೆರವಾದರು. ವಿರಾಮದ ವೇಳೆ ಸ್ಕೋರ್‌ 1–1ರಲ್ಲಿ ಸಮಬಲಗೊಂಡಿತ್ತು.

ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ ಭಾರತ, 31ನೇ ನಿಮಿಷ ನವನೀತ್‌ ಕೌರ್ ಗಳಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತು. 25 ಯಾರ್ಡ್‌ ವೃತ್ತದಲ್ಲಿ ಚೆಂಡನ್ನು ನಿಯಂತ್ರಿಸಿದ ನವನೀತ್‌ ಕೌರ್‌, ನಂತರ ಎದುರಾಳಿ ಆಟಗಾರ್ತಿಯರನ್ನು ತಪ್ಪಿಸಿಕೊಂಡು ಮುನ್ನುಗ್ಗಿ ಚೆಂಡನ್ನು ಬಲವಾಗಿ ಗೋಲು ಪೆಟ್ಟಿಗೆಗೆ ತಳ್ಳಿದರು. ಗುರ್ಜಿತ್‌ ಕೌರ್‌ 37ನೇ ನಿಮಿಷ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಯಶಸ್ಸು ಗಳಿಸಿ ಭಾರತದ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು.

43ನೇ ನಿಮಿಷ ಭಾರತ ರಕ್ಷಣಾ ಆಟಗಾರ್ತಿಯರು ಚೆಂಡನ್ನು ತಡೆಯುವ ಯತ್ನದಲ್ಲಿ ಎಡವಿದ ಪರಿಣಾಮ, ಡೆನಿಸೆ ಕ್ರಿಮರ್‌ಮ್ಯಾನ್ಸ್ ಅವರ ಪಾಸ್‌ನಲ್ಲಿ ಚೆಂಡನ್ನು ಪಡೆದ ಮಾನ್ಯುಯೆಲಾ ಉರೋಝ್‌ ಚಿಲಿ ತಂಡಕ್ಕೆ ಎರಡನೇ ಗೋಲನ್ನು ಗಳಿಸಿ ಹಿನ್ನಡೆಯನ್ನು 3–2ಕ್ಕೆ ಇಳಿಸಿದರು. ನಾಯಕಿ ರಾಣಿ ರಾಮಪಾಲ್‌, 57ನೇ ನಿಮಿಷ ಲಿಲಿಮಾ ಮಿಂಜ್‌ ಅವರ ಪಾಸ್‌ನಲ್ಲಿ ಗೋಲನ್ನು ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.

ಗೆಲುವಿನ ಅರ್ಪಣೆ: ಈ ಗೆಲುವನ್ನು ತಂಡದ ಸಹ ಆಟಗಾರ್ತಿ ಲಾಲ್‌ರೆಮಿಸಿಯಾಮಿ ಅವರ ತಂದೆಗೆ ಅರ್ಪಿಸುವುದಾಗಿ ರಾಣಿ ರಾಮಪಾಲ್‌ ತಿಳಿಸಿದರು. ಲಾಲ್‌ರೆಮಿಸಿಯಾಮಿ ತಂದೆ ಶುಕ್ರವಾರ ನಿಧನರಾಗಿದ್ದರು.

ತಂದೆಯ ಮರಣದ ಶೋಕದಲ್ಲಿಯೂ ಸಂಯಮ ಪ್ರದರ್ಶಿಸಿ ಆಟವಾಡಿದ ರೆಮಿಸಿಯಾಮಿ ಅವರನ್ನು ರಾಣಿ ಶ್ಲಾಘಿಸಿದರು. ‘ಲಾಲ್‌ ರೆಮಿಸಿಯಾಮಿ ಬಗ್ಗೆ ಹೆಮ್ಮೆ ಮೂಡುತ್ತದೆ. ಅವರು ತಾಯ್ನಾಡಿಗೆ ಹೋಗದೇ ತಂಡದ ಜೊತೆಗೇ ಇರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.