ADVERTISEMENT

ಹಾಕಿ ಸರಣಿ: ಭಾರತ ಮಹಿಳಾ ತಂಡ ಆಸ್ಟ್ರೇಲಿಯಾಕ್ಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 13:11 IST
Last Updated 21 ಏಪ್ರಿಲ್ 2025, 13:11 IST
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ   

ಬೆಂಗಳೂರು: ಐದು ಪಂದ್ಯಗಳ ಹಾಕಿ ಸರಣಿಯನ್ನು ಆಡಲು ಸಲೀಮಾ ಟೇಟೆ ನೇತೃತ್ವದ ಭಾರತ ಮಹಿಳಾ ತಂಡ ಭಾನುವಾರ ರಾತ್ರಿ ಆಸ್ಟ್ರೇಲಿಯಾಕ್ಕೆ ತೆರಳಿತು. ಏಪ್ರಿಲ್ 26ರಂದು ಆರಂಭವಾಗುವ ಈ ಸರಣಿಯ, ಎಫ್‌ಐಎಚ್‌ ಪ್ರೊ ಲೀಗ್‌ಗೆ ಸಿದ್ಧತೆ ನಡೆಸಲು ಅವಕಾಶ ಕಲ್ಪಿಸಿದೆ.

ಭಾರತ ತಂಡ ಏ. 26 ಮತ್ತು 27ರಂದು ಆಸ್ಟ್ರೇಲಿಯಾ ಎ ವನಿತಾ ತಂಡದ ವಿರುದ್ಧ ಆಡಲಿದೆ. ಬಳಿಕ ಮೇ 1, 3 ಮತ್ತು 4ರಂದು ಆಸ್ಟ್ರೇಲಿಯಾ ಸೀನಿಯರ್ ತಂಡದ ಎದುರು ಕಣಕ್ಕಿಳಿಯಲಿದೆ. ಪಂದ್ಯಗಳು ಪರ್ತ್‌ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ಮಹಿಳಾ ತಂಡ ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನ ಪಡೆದಿದೆ. ಭಾರತ ತಂಡ ಒಂಬತ್ತನೇ ಸ್ಥಾನದಲ್ಲಿದೆ.

ADVERTISEMENT

ಸಲೀಮಾ ನಾಯಕತ್ವದ 26 ಆಟಗಾರ್ತಿಯರ ತಂಡಕ್ಕೆ ಅನುಭವಿ ಪಾರ್ವರ್ಡ್‌ ನವನೀತ್ ಕೌರ್‌ ಉಪನಾಯಕಿ ಆಗಿದ್ದಾರೆ. ತಂಡವು ಈ ಸರಣಿಯ ನಂತರ ಎಫ್‌ಐಎಚ್‌ ಪ್ರೊ ಲೀಗ್‌ನ ಯುರೋಪಿಯನ್‌ ಲೆಗ್‌ಗೆ ಸಜ್ಜಾಗಬೇಕಾಗಿದೆ. ಈ ಲೀಗ್‌ ಜೂನ್‌ 7ರಂದು ನೆದರ್ಲೆಂಡ್ಸ್‌ನಲ್ಲಿ ಆರಂಭವಾಗಲಿದೆ.

‘ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ನಾವು ಕಠಿಣ ಶ್ರಮ ಹಾಕಿದ್ದೇವೆ. ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಲು ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. ಆಸ್ಟ್ರೇಲಿಯಾ ಎ ಮತ್ತು ಸೀನಿಯರ್ ತಂಡದ ವಿರುದ್ಧದ ಈ ಸರಣಿಯು ನಮ್ಮ ತಂತ್ರಗಳನ್ನು ಪರೀಕ್ಷೆಗೊಡ್ಡಲು ಮತ್ತು ನಾವು ಉತ್ತಮ ತಂಡವಾಗಿ ರೂಪುಗೊಳ್ಳಲು ಅವಕಾಶ ಒದಗಿಸಲಿದೆ’ ಎಂದು ಸಲೀಮಾ ಅವರು ಪ್ರವಾಸಕ್ಕೆ ನಿರ್ಗಮಿಸುವ ಮೊದಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.