ADVERTISEMENT

Asian Games | Hockey: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಆಘಾತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2023, 10:57 IST
Last Updated 5 ಅಕ್ಟೋಬರ್ 2023, 10:57 IST
<div class="paragraphs"><p>(ಪಿಟಿಐ ಚಿತ್ರ)</p></div>

(ಪಿಟಿಐ ಚಿತ್ರ)

   

ಹಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನಗೊಂಡಿತು. ಆತಿಥೇಯ ಚೀನಾ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 4–0 ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿತು.

ಈ ಸೋಲಿನಿಂದ ವನಿತೆಯರ ತಂಡ ಚಿನ್ನದ ಪೈಪೋಟಿಯಿಂದ ಹೊರಬಿತ್ತು ಮಾತ್ರವಲ್ಲ, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯುವ ಅವಕಾಶವೂ ಕೈತಪ್ಪಿತು.

ADVERTISEMENT

ಕಳೆದ ಆವೃತ್ತಿಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದ ಭಾರತ ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿದ್ದು, ಇಲ್ಲಿ ಅತಿ ಹೆಚ್ಚಿನ ರ್‍ಯಾಂಕಿಂಗ್ ಪಡೆದ ತಂಡವೆನಿಸಿತ್ತು. ಚೀನಾ ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿತ್ತು. ಚೀನಾ, ನಾಲ್ಕು ವರ್ಷಗಳ ಹಿಂದೆ ಕಂಚಿನ ಪದಕ ಗೆದ್ದುಕೊಂಡಿತ್ತು.

ಜಿಯಾಕಿ ಝಾಂಗ್‌ (25ನೇ ನಿಮಿಷ), ಮೀರಾಂಗ್ ಝೌ (40ನೇ ನಿಮಿಷ), ಮೀಯು ಲಿಯಾಂಗ್ (55ನೇ ನಿಮಿಷ) ಮತ್ತು ಬಿಂಗ್‌ಫೆಂಗ್‌ ಗು (60ನೇ ನಿಮಿಷ) ಅವರು ಚೀನಾ ತಂಡದ ಪರ ಗೋಲುಗಳನ್ನು ಗಳಿಸಿದರು.

‘ನಾವು ಇಂದು ನಿರೀಕ್ಷಿಸಿದ್ದ ಫಲಿತಾಂಶ ಇದಾಗಿರಲಿಲ್ಲ. ನನ್ನ ತಂಡದ ಪ್ರದರ್ಶನದಿಂದ ನಿರಾಶೆಯಾಗಿದೆ’ ಎಂದು ನಾಯಕಿ ಸವಿತಾ ಪ್ರತಿಕ್ರಿಯಿಸಿದರು.

‘ಚೀನಾ ಉತ್ತಮ ತಂಡ ನಿಜ. ಆದರೆ ನಮ್ಮ ತಂಡವೂ ಚೆನ್ನಾಗಿಯೇ ಇತ್ತು. ಇಂದು ನಮ್ಮ ದಿನವಾಗಿರಲಿಲ್ಲ. ಈ ಪಂದ್ಯಕ್ಕೆ ರೂಪಿಸಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ನಾವು ಪಂದ್ಯ ಅವರಿಗೆ ಕೊಟ್ಟೆವು’ ಎಂದು ಬೇಸರ ವ್ಯಕ್ತಪಡಿಸಿದರು.

ಚೀನಾ ಆರಂಭದಿಂದಲೇ ಆಕ್ರಮಣದ ಕಡೆಯೇ ಲಕ್ಷ್ಯ ಕೊಟ್ಟು, ಭಾರತದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಭಾರತದ ಗೋಲಿನ ಕಡೆ ಪದೇ ಪದೇ ದಾಳಿಗಳನ್ನು ನಡೆಸಿತು. ಆ ತಂಡಕ್ಕೆ ಆರನೇ ನಿಮಿಷ ಗೋಲಿನ ಅವಕಾಶ ಲಭಿಸಿದ್ದರೂ ಗೋಲ್‌ಕೀಪರ್ ಸವಿತಾ ಆ ಅವಕಾಶವನ್ನು ತಡೆದರು. 11ನೇ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲೂ ಗೋಲು ಬರಲಿಲ್ಲ.

ಚೀನಾದ ಈ ಪ್ರಾಬಲ್ಯದ ಮುಂದೆ ಭಾರತ ಕಕ್ಕಾಬಿಕ್ಕಿಯಾಯಿತು. ಇನ್ನೊಂದೆಡೆ 25 ನಿಮಿಷ ಐದನೇ ಪೆನಾಲ್ಟಿ ಕಾರ್ನರ್‌ಅನ್ನು ಝೊಂಗ್ ಗೋಲಾಗಿ ಪರಿವರ್ತಿಸಿ ಚೀನಾಕ್ಕೆ ಮುನ್ನಡೆ ಒದಗಿಸಿಕೊಟ್ಟರು.

ಈ ಒತ್ತಡದಲ್ಲಿ ಭಾರತ ರಕ್ಷಣೆಯತ್ತಲೇ ಗಮನಹರಿಸಿತು. ವಿರಾಮ ಕಳೆದು ಹತ್ತನೇ ನಿಮಿಷ ಚೀನಾ ಮುನ್ನಡೆ ಹೆಚ್ಚಿಸಿತು. ಭಾರತ ಈ ಮಧ್ಯೆ ಪ್ರತಿದಾಳಿಗೆ ಪ್ರಯತ್ನಿಸಿದರೂ ಉತ್ತಮ ಎನ್ನಬಹುದಾದ ಅವಕಾಶ ದೊರಕಲಿಲ್ಲ.

ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸಿದರೂ ಗೋಲಾಗಿ ಪರಿವರ್ತಿಸಲು ಆಗಲಿಲ್ಲ. ಚೀನಾದ ಹೆಚ್ಚಿನ ಆಟಗಾರ್ತಿಯರು ಗೋಲು ಅವಕಾಶ ನಿರಾಕರಿಸುವ ಉದ್ದೇಶದಿಂದ ರಕ್ಷಣಾಕೋಟೆಯ ಕಡೆ ಕಾವಲು ಕಾದರು.

ಈ ಮಧ್ಯೆ ಪ್ರತಿದಾಳಿಯಲ್ಲಿ ಲಿಯಾಂಗ್‌ ತಂಡದ ಮುನ್ನಡೆ ಹೆಚ್ಚಿಸಿದರು. ಪಂದ್ಯದ ಅಂತಿಮ ನಿಮಿಷ ಚೀನಾ ಅಂತರವನ್ನು 4–0 ಗೋಲುಗಳಿಗೆ ಏರಿಸಿತು. ಬಿಂಗ್‌ಫೆಂಗ್‌ ಗು ಪೆನಾಲ್ಟಿ ಕಾರ್ನರ್‌ನಲ್ಲಿ ಈ ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.