ADVERTISEMENT

ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌: ಭಾರತದ ನಾರಿಯರ ಚಾರಿತ್ರಿಕ ಸಾಧನೆ

ಪಿಟಿಐ
Published 20 ನವೆಂಬರ್ 2025, 23:07 IST
Last Updated 20 ನವೆಂಬರ್ 2025, 23:07 IST
ಚಿನ್ನ ಗೆದ್ದ ಪ್ರೀತಿ
ಚಿನ್ನ ಗೆದ್ದ ಪ್ರೀತಿ   

ಗ್ರೇಟರ್ ನೊಯ್ಡಾ: ಭಾರತದ ನಾಲ್ವರು ಮಹಿಳಾ ಸ್ಪರ್ಧಿಗಳು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌ನ ಅಂತಿಮ ದಿನವಾದ ಗುರುವಾರ ಮೈಲಿಗಲ್ಲು ಸ್ಥಾಪಿಸಿದರು. ಮೀನಾಕ್ಷಿ (48 ಕೆ.ಜಿ.), ಪ್ರೀತಿ (54 ಕೆ.ಜಿ), ಅರುಂಧತಿ ಚೌಧರಿ (70 ಕೆ.ಜಿ.) ಮತ್ತು ನೂಪುರ್ (80+ ಕೆ.ಜಿ) ಅವರು ಶಹೀದ್‌ ವಿಜಯ್‌ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ವಿಶೇಷವೆಂದರೆ ಭಾರತದ ನಾರಿಯರು ಗೆದ್ದ ತೂಕ ವಿಭಾಗಗಳು 2028ರ ಒಲಿಂಪಿಕ್ಸ್‌ನಲ್ಲೂ ಇವೆ. ಆ ಮೂಲಕ ಲಾಸ್‌ ಏಂಜಲೀಸ್‌ ಕ್ರೀಡೆಗಳಲ್ಲಿ ಭಾರತ ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಬುನಾದಿ ಸಜ್ಜುಗೊಂಡಿದೆ.

ಜಾದುಮಣಿ ಸಿಂಗ್‌, ಪವನ್‌ ಬರ್ತ್ವಾಲ್‌, ಅಭಿನಾಶ್‌ ಜಾಮವಾಲ್‌ ಮತ್ತು ಅಂಕುಶ್ ಪಂಘಲ್ ಅವರು ಬೆಳ್ಳಿ ಪದಕಗಳನ್ನು ಗೆದ್ದು ಪುರುಷರ ವಿಭಾಗದಲ್ಲೂ ಭಾರತ ಉತ್ತಮ ಸಾಧನೆ ತೋರಲು ನೆರವಾದರು.

ADVERTISEMENT

ಭಾರತದ ಇನ್ನೂ ಏಳು ಮಂದಿ ಬಾಕ್ಸರ್‌ಗಳು ಚಿನ್ನದ ಪದಕಕ್ಕೆ ಸೆಣಸಾಡುವ ಅರ್ಹತೆ ಪಡೆದಿದ್ದಾರೆ.

ಮೀನಾಕ್ಷಿ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 5–0 ಯಿಂದ ಹಾಲಿ ಏಷ್ಯನ್ ಚಾಂಪಿಯನ್ ಫರ್ಜೊನಾ ಫೊಝಿಲೊವಾ ಅವರನ್ನು ಸೋಲಿಸಿದರು. ವಿಶ್ವ ಚಾಂಪಿಯನ್ ಮೀನಾಕ್ಷಿ ಅವರು ವೇಗದ ಜೊತೆಗೆ ನಿಖರತೆ, ಎಡ–ಬಲ ಪ್ರಹಾರಗಳ ಸಂಯೋಜನೆ, ಪ್ರಬಲ ರಕ್ಷಣೆಯೊಂದಿಗೆ  ಆರಂಭದಿಂದಲೇ ಮೇಲುಗೈ ಸಾಧಿಸಿದರು.

ಪ್ರೀತಿ ಸಹ 5–0 ಯಿಂದ ಇಟಲಿಯ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ ಸಿರಿನ್ ಚರಾಬಿ ಅವರನ್ನು ಮಣಿಸಿದರು.

ಮಾಜಿ ಯುವ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಅವರಂತೂ ಅಮೋಘ ಪ್ರದರ್ಶನ ನೀಡಿ  5–0 ಯಿಂದ ಉಜ್ಬೇಕಿಸ್ತಾನದ ಅಝಿಝಾ ಝೊಕಿರೋವಾ ವಿರುದ್ಧ ಸುಲಭ ಗೆಲುವು ಸಾಧಿಸಿದರು. 18 ತಿಂಗಳ ನಂತರ ಅಖಾಡಕ್ಕೆ ಮರಳಿದ ಭಾರತದ ಬಾಕ್ಸರ್‌, ಪ್ರಖರ ಆಕ್ರಮಣದ ಜೊತೆಗೆ ಶಿಸ್ತಿನ ರಕ್ಷಣೆ, ನಿರ್ಣಾಯಕ ಘಟ್ಟದಲ್ಲಿ ಪ್ರಹಾರಗಳನ್ನು ನೀಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಭಾರತದ ಚಿನ್ನದ ಬೇಟೆ ಮುಂದುವರಿಸಿದ ನೂಪುರ್ 80+ ಕೆ.ಜಿ ವಿಭಾಗದಲ್ಲಿಉಜ್ಬೇಕಿಸ್ತಾನದ ಸೊಟಿಮ್‌ಬೊಯೆವಾ ಒಲ್ಟಿನೋಯ್ ಅವರನ್ನು ತೀವ್ರ ಹೋರಾಟದ ಫೈನಲ್‌ನಲ್ಲಿ  ಸೋಲಿಸಿದರು.

ಪುರುಷರ 50 ಕೆ.ಜಿ. ತೂಕ ವಿಭಾಗದ ಸ್ಪರ್ಧೆಯಲ್ಲಿ ಜಾದುಮಣಿ 1–4 ರಿಂದ ಉಜ್ಬೇಕ್‌ ಬಾಕ್ಸರ್ ಅಸಿಲ್ಬೆಕ್‌ ಜಲಿಲೋವ್ ಎದುರು ಸೋಲನುಭವಿಸಿದರು. ಈ ವಾರದ ಆದಿಯಲ್ಲಿ 55 ಕೆ.ಜಿ. ವಿಭಾಗದಲ್ಲಿ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಿ ಫೈನಲ್ ತಲುಪಿದ ಪವನ್‌ ಬರ್ತ್ವಾಲ್‌, ಉಜ್ಬೇಕಿಸ್ತಾನದ ಸಮಂದರ್ ಒಲಿಮೋವ್ ಅವರಿಗೆ ಮಣಿದರು.

ಅಭಿನಾಶ ಜಾಮವಾಲ್ (65 ಕೆ.ಜಿ ವಿಭಾಗದ) ಫೈನಲ್‌ನಲ್ಲಿ ಸ್ಫೂರ್ತಿಯುತವಾಗಿ ಹೋರಾಡಿದರೂ ಅಂತಿಮವಾಗಿ 1:4ರಲ್ಲಿ ಜಪಾನ್‌ನ ಅನುಭವಿ ಶಿಯೋನ್ ನಿಶಿಯಾಮಾ ಅವರಿಗೆ ಸೋತರು. ಅಂಕುಶ್‌ (80 ಕೆ.ಜಿ ವಿಭಾಗ) ಅವರು ವಿಶ್ವಕಪ್ ಚಾಂಪಿಯನ್‌, ಇಂಗ್ಲೆಂಡ್‌ನ ಶಿಟ್ಟು ಒಲದಿಮೆಜಿ ಎದುರು ಪರಾಭವ ಅನುಭವಿಸಿದರು.

ಸ್ವರ್ಣ ಗೆದ್ದ ನೂಪುರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.