ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಮೇಲೆ ಸಿಂಧು ಚಿತ್ತ

ಸೈನಾ, ಸಮೀರ್ ಅಲಭ್ಯ

ಪಿಟಿಐ
Published 15 ನವೆಂಬರ್ 2021, 12:32 IST
Last Updated 15 ನವೆಂಬರ್ 2021, 12:32 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ಬಾಲಿ, ಇಂಡೊನೇಷ್ಯಾ: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಭಾರತದ ಪಿ.ವಿ.ಸಿಂಧು ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು ‍ಪ್ರಶಸ್ತಿ ಮೇಲೆ ಚಿತ್ತ ನೆಟ್ಟಿದ್ದಾರೆ.

ಮಂಗಳವಾರ ಇಲ್ಲಿ ಆರಂಭವಾಗುವ ಟೂರ್ನಿಯಿಂದ ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಗಾಯದ ಹಿನ್ನೆಲೆಯಲ್ಲಿ ಆಡುತ್ತಿಲ್ಲ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗರಿ ಮೂಡಿಸಿದ್ದ ಸಿಂಧು, ಟೋಕಿಯೊ ಕೂಟದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಬಳಿಕ ಡೆನ್ಮಾರ್ಕ್‌ ಹಾಗೂ ಫ್ರಾನ್ಸ್‌ ಟೂರ್ನಿಗಳಲ್ಲಿ ಕ್ರಮವಾಗಿ ಕ್ವಾರ್ಟರ್‌ಫೈನಲ್‌ ಹಾಗೂ ಸೆಮಿಫೈನಲ್ ತಲುಪಿದ್ದರು. ನಂತರ ಜರ್ಮನಿಯಲ್ಲಿ ನಡೆದ ಹೈಲೊ ಓಪನ್‌ನಿಂದ ಹಿಂದೆ ಸರಿದಿದ್ದರು.

ADVERTISEMENT

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿ, ಎರಡು ವರ್ಷಗಳ ಹಿಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿದ್ದರು. ಈ ಬಾರಿ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಅವರಿಗೆ ಥಾಯ್ಲೆಂಡ್‌ನ ಸುಪಿನಿದಾ ಕೇಟ್‌ಥೊಂಗ್ ಸವಾಲು ಎದುರಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ಉಬರ್‌ ಕಪ್ ಟೂರ್ನಿಯಲ್ಲಿ ಗಾಯದಿಂದ ಬಳಲಿದ್ದರು. ಸಮೀರ್‌ ಅವರಿಗೆ ಡೆನ್ಮಾರ್ಕ್‌ ಓಪನ್ ಟೂರ್ನಿಯಲ್ಲಿ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದು, ಈ ಟೂರ್ನಿಗೆ ಲಭ್ಯರಿಲ್ಲ.

ಹೈಲೊ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕರ ಘಟ್ಟ ತಲುಪಿದ್ದ ಕಿದಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್ ಅವರ ಮೇಲೂ ಎಲ್ಲರ ಗಮನವಿದೆ. ಈ ವಿಭಾಗದಲ್ಲಿ ಬಿ.ಸಾಯಿ ಪ್ರಣೀತ್‌, ಎಚ್‌.ಎಸ್‌.ಪ್ರಣಯ್‌, ಪರುಪಳ್ಳಿ ಕಶ್ಯಪ್‌ ಕೂಡ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಉದಯೋನ್ಮುಖ ಆಟಗಾರರಾದ ಎಂ.ಆರ್‌.ಅರ್ಜುನ್‌–ಧೃವ ಕಪಿಲ ಕಣಕ್ಕಿಳಿಯಲಿದ್ದರೆ, ಕರ್ನಾಟಕದ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿರೆಡ್ಡಿ ಮಹಿಳಾ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಅಶ್ವಿನಿ– ಬಿ.ಸುಮೀತ್ ರೆಡ್ಡಿ, ಸಿಕ್ಕಿ– ಧೃವ ಕಪಿಲಾ ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.