ADVERTISEMENT

ಮೂಡುಬಿದಿರೆ: ಜ.4ರಿಂದ ಅಂತರ ವಿವಿ ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:31 IST
Last Updated 22 ಡಿಸೆಂಬರ್ 2021, 19:31 IST

ಮೂಡಬಿದಿರೆ: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ,ಮಂಗಳೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಸಹಯೋಗದಲ್ಲಿ ಜನವರಿ 4ರಿಂದ 7ರವರೆಗೆ 81ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್‌ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ, ‘400 ವಿ.ವಿ.ಗಳ ಎರಡು ಸಾವಿರ ಕ್ರೀಡಾಪಟುಗಳು, ಒಂದು ಸಾವಿರ ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆನ್‌ಲೈನ್‌ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ ಏಳು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೇದಿಕೆಯಲ್ಲಿ ಪದಕ ವಿಜೇತರನ್ನು ಗೌರವಿಸಲಾಗುವುದು’ ಎಂದರು.

‘ಜನವರಿ 4ರಂದು ಬೆಳಿಗ್ಗೆ 6.30ಕ್ಕೆ ಸ್ಪರ್ಧೆಗಳು ಆರಂಭವಾಗಲಿವೆ. ಸಂಜೆ 3.30ಕ್ಕೆ ಮೂಡುಬಿದಿರೆ ಹನುಮಾನ್ ದೇವಸ್ಥಾನದ ಎದುರಿನಿಂದ ಮುಖ್ಯ ರಸ್ತೆಯಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬಳಿಕ ಕ್ರೀಡಾಕೂಟವನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಲಿದ್ದಾರೆ. ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಭಾಗವಹಿಸುವರು’ ಎಂದರು.

ADVERTISEMENT

‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ 5ನೇ ಬಾರಿಗೆ ಅಖಿಲಭಾರತ ಅಂತರ ವಿ.ವಿ. ಅಥ್ಲೆಟಿಕ್ಸ್‌ ಆಯೋಜಿಸಲಾಗಿದೆ. ಪದಕ ವಿಜೇತರಿಗೆ ಆಳ್ವಾಸ್‌ನಿಂದ ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನ ನೀಡಲಾಗುವುದು. ಕೂಟ ದಾಖಲೆ ನಿರ್ಮಿಸಿದವರಿಗೆ ₹25 ಸಾವಿರ, ಸಮಗ್ರ ಪ್ರಶಸ್ತಿ ಪಡೆದ ತಂಡಕ್ಕೆ ₹50 ಸಾವಿರ, ರನ್ನರ್ ಅಪ್ ತಂಡಕ್ಕೆ ₹30 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ ₹20 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು’ ಎಂದು ಮೋಹನ ಆಳ್ವ ತಿಳಿಸಿದರು.

ಮಂಗಳೂರು ವಿ.ವಿ. ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.